ಮಡಿಕೇರಿ: ಕೊಡಗಿಗೆ ಮಂತ್ರಿ ಸ್ಥಾನ ಬೇಕೇ ಬೇಕು, ವಿಧಾನಸಭಾಧ್ಯಕ್ಷರಾಗಿದ್ದ ಸಂದರ್ಭ ಕೆ.ಜಿ.ಬೋಪಯ್ಯ ಸರ್ಕಾರವನ್ನೇ ರಕ್ಷಿಸಿದ್ದಾರೆ. ಶಾಸಕ ಅಪ್ಪಚ್ಚು ರಂಜನ್ ಕೂಡ ಮಂತ್ರಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಕೊಡಗು ಸಣ್ಣ ಜಿಲ್ಲೆಯಾಗಿದ್ದರೂ ಬಿಜೆಪಿಯ ಭದ್ರಕೋಟೆಯಾಗಿದೆ. ಹೀಗಾಗಿ ಕೊಡಗಿಗೆ ಮಂತ್ರಿ ಸ್ಥಾನ ಬೇಕೇ ಬೇಕು ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.
ಮಡಿಕೇರಿಯಿಂದ ಮಂಗಳೂರಿಗೆ ತೆರಳುವ ರಸ್ತೆ ಬಳಿ ಮಳೆಗಾಲದಲ್ಲಿ ನಿರಂತರ ಭೂಕುಸಿತ ಉಂಟಾಗುತ್ತಿರುವುದು ಮತ್ತು ಎರಡನೇ ಮೊಣ್ಣಂಗೇರಿ ಬಳಿ ಹೆದ್ದಾರಿಯಲ್ಲಿಯೇ ಬಿರುಕು ಬಿಟ್ಟಿರುವ ಸ್ಥಳವನ್ನು ಸಂಸದ ಪ್ರತಾಪ್ ಸಿಂಹ ಪರಿಶೀಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಬಸವರಾಜ ಬೊಮ್ಮಾಯಿ ಚಿಕ್ಕಂದಿನಿಂದಲೂ ರಾಜಕೀಯದ ಬೆಸುಗೆ ಹೊಂದಿದವರು. ತಂದೆ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಹೇಗೆ ಅಧಿಕಾರ ನಿಭಾಯಿಸಿದರು ಎಂಬುದೂ ಬಸವರಾಜ ಅವರಿಗೆ ತಿಳಿದಿದೆ. ಶಾಂತಿಯುತವಾಗಿ ರಾಜ್ಯವನ್ನು ಮುನ್ನಡೆಸಲಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
Advertisement
Advertisement
ಮಂಗಳೂರು ಹೆದ್ದಾರಿಯಲ್ಲಿ ಬಿರುಕು
ಮೂರು ವರ್ಷಗಳಿಂದ ಕೊಡಗಿನಲ್ಲಿ ಸತತವಾಗಿ ಮಹಾಮಳೆ ಆಗುತ್ತಿದ್ದು, ಭೂಕುಸಿತ ಉಂಟಾಗುತ್ತಿದೆ. ಮುನ್ನೆಚ್ಚರಿಕೆಯಾಗಿ ಸಂಪಾಜೆಯವರೆಗೆ 18 ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದೆವು. ಹೀಗಿದ್ದರೂ ಮತ್ತೆ ಸಣ್ಣ ಪ್ರಮಾಣದ ಭೂಕುಸಿತ ಕಂಡುಬಂದ. ಹಿನ್ನಲೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಸಲಹೆಯಂತೆ ಸಂಪಾಜೆಯವರೆಗೆ ಹೆಚ್ಚುವರಿಯಾಗಿ 22 ಕಡೆ ತಡೆಗೋಡೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
Advertisement
ಎರಡನೇ ಮೊಣ್ಣಂಗೇರಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ರಸ್ತೆ ಮಧ್ಯೆಯೇ ಬಿರುಕು ಬಂದಿರುವುದಕ್ಕೆ ಜಲಸ್ಫೋಟ ಕಾರಣವಾಗಿರಬಹುದೇ ಎಂದು ತಿಳಿದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ತಜ್ಞರಿಂದ ಮಣ್ಣು ಪರೀಕ್ಷೆ ಮತ್ತು ಸ್ಥಳ ಪರಿಶೀಲನೆ ಕೈಗೊಂಡು ನೈಜವಾದ ಕಾರಣ ಕಂಡುಕೊಳ್ಳಲಾಗುತ್ತದೆ. ಹೆದ್ದಾರಿಯಲ್ಲಿ ವಾಹನಗಳ ಸಂಚಾರದ ಒತ್ತಡ ಹೆಚ್ಚಾಗಿರುವುದೂ ರಸ್ತೆ ಬಿರುಕು ಹಾಗೂ ಭೂಕುಸಿತಕ್ಕೆ ಕಾರಣ. ಆದರೆ ಪರಿಣಿತರ ತಂಡದ ಪರಿಶೀಲನೆ ನಂತರ ಇದು ಗೊತ್ತಾಗಲಿದೆ ಎಂದು ಪ್ರತಾಪ್ ಸಿಂಹ ಹೇಳಿದರು.
Advertisement
ಸೈನಿಕನ ಕುಟುಂಬಕ್ಕೆ ಸೂಕ್ತ ರಕ್ಷಣೆ
ಮಡಿಕೇರಿ ಸಮೀಪದ ಬೋಯಿಕೇರಿ ಬಳಿ ಸೈನಿಕ ಅಶೋಕ್ ಮೇಲೆ ದುಷ್ಕರ್ಮಿಗಳ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, ಘಟನೆಗೆ ಸಂಬಂಧಿಸಿದಂತೆ ಕೆಲವರನ್ನು ಮಾತ್ರ ಬಂಧಿಸಲಾಗಿದೆ. ಆದರೆ ಸೈನಿಕರ ಮೇಲಿನ ಹಲ್ಲೆಕೋರರು ಸಾಕಷ್ಟು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಘಟನೆಯಲ್ಲಿ ಪಾಲ್ಗೊಂಡ ಎಲ್ಲರನ್ನೂ ಬಂಧಿಸಲೇಬೇಕು ಎಂದು ಹೇಳಿದ್ದಾರೆ.
ಅಂಬುಲೆನ್ಸ್ ಚಾಲಕ ಮಾಡಿರುವ ವೀಡಿಯೋ ಪರಿಶೀಲಿಸಿ, ಪೊಲೀಸರು ಸೂಕ್ತ ತನಿಖೆ ಕೈಗೊಂಡು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪೊಲೀಸರು ಈ ಬಗ್ಗೆ ಕಾರ್ಯಪ್ರವೃತ್ತರಾಗಬೇಕು. ಶಾಸಕ ಬೋಪಯ್ಯ ಕೂಡ ಈ ನಿಟ್ಟಿನಲ್ಲಿ ಈಗಾಗಲೇ ಪೊಲೀಸ್ ಇಲಾಖೆಯನ್ನು ಎಚ್ಚರಿಸಿದ್ದಾರೆ. ಕೊಡಗಿನಲ್ಲಿ ಘಟನೆ ಸಂಬಂಧಿತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆಗಸ್ಟ್ 20ರ ನಂತರ ಸೈನಿಕ ಕರ್ತವ್ಯಕ್ಕೆ ತೆರಳಿದ ಬಳಿಕ ಕುಟುಂಬದ ರಕ್ಷಣೆ ಬಗ್ಗೆ ಆತಂಕ ಇದೆ. ಖಂಡಿತವಾಗಿಯೂ ಸರ್ಕಾರ ಸೈನಿಕರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಲಿದೆ ಎಂದು ಪ್ರತಾಪ್ ಸಿಂಹ ಭರವಸೆ ನೀಡಿದರು.