ಕೊಚ್ಚಿ- ಮಂಗಳೂರು ಗ್ಯಾಸ್‌ ಪೈಪ್‌ಲೈನ್ ಯೋಜನೆ‌ ತಾಂತ್ರಿಕತೆಯ ಅದ್ಭುತ – ಮೋದಿ

Public TV
4 Min Read
Kochi Mangaluru natural gas pipeline 2

– ಇಂಧನ ಪೊರೈಕೆಗೆ ಸಮಗ್ರ ಯೋಜನೆ
– 6 ವರ್ಷದಲ್ಲಿ 16 ಸಾವಿರ ಕಿ.ಮೀ.
– ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತು

ನವದೆಹಲಿ/ಮಂಗಳೂರು: ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಕೊಳವೆ ಮಾರ್ಗ ತಾಂತ್ರಿಕತೆಯ ಅದ್ಭುತ, ಇದೊಂದು ಭವಿಷ್ಯದ ಯೋಜನೆಯಾಗಿದ್ದು, ಭಾರತದ ಅಭಿವೃದ್ಧಿಯ ಚಾಲನಾ ಶಕ್ತಿಯಾಗಿದೆ. ಮುಂದಿನ 6 ವರ್ಷದಲ್ಲಿ ಗ್ಯಾಸ್‌ ಪೈಪ್‌ಲೈನ್‌ ನೆಟ್‌ವರ್ಕ್‌ ದ್ವಿಗುಣವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಕರ್ನಾಟಕದ ಮಂಗಳೂರು – ಕೇರಳದ ಕೊಚ್ಚಿ ನಡುವಿನ ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು ದೇಶಕ್ಕೆ ಸಮರ್ಪಿಸಿ ಮಾತನಾಡಿದ ಅವರು, 1987 ರಿಂದ 2014 ರ ಅವಧಿಯಲ್ಲಿ ದೇಶದಲ್ಲಿ 15 ಸಾವಿರ ಕಿ.ಮೀ. ನೈಸರ್ಗಿಕ ಅನಿಲ ಪೈಪ್ ಲೈನ್ ಅಳವಡಿಸಲಾಗಿತ್ತು. ಆದರೆ ಕಳೆದ ಆರು ವರ್ಷಗಳ ಅವಧಿಯಲ್ಲಿ 16 ಸಾವಿರ ಕಿ.ಮೀ. ನಷ್ಟು ನೈಸರ್ಗಿಕ ಅನಿಲ ಪೈಪ್ ಲೈನ್ ಅಳವಡಿಸುವ ಹೊಸ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಮುಂದಿನ 5-6 ವರ್ಷದಲ್ಲಿ ಈ ಯೋಜನೆಗಳೆಲ್ಲ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

Kochi Mangaluru natural gas pipeline 6

ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಕೊಳವೆ ಮಾರ್ಗ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಈ ಪೈಪ್‌ಲೈನ್‌ ಯೋಜನೆ ನಮ್ಮ ನಾಗರಿಕರ ಜೀವನವನ್ನು ಮತ್ತಷ್ಟು ಸುಗಮಗೊಳಿಸುತ್ತದೆ. ಕರಾವಳಿ ಪ್ರದೇಶಗಳ ಅಭಿವೃದ್ಧಿ ಮತ್ತು ಶ್ರಮಿಕ ಮೀನುಗಾರರ ಕಲ್ಯಾಣ ನಮ್ಮ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ನೀಲಿ ಆರ್ಥಿಕತೆಯ ಪರಿವರ್ತನೆ, ಕರಾವಳಿ ಮೂಲಸೌಕರ್ಯ ಸುಧಾರಣೆ, ಕಡಲ ಪರಿಸರ ವ್ಯವಸ್ಥೆಯ ರಕ್ಷಣೆಗಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದರು.

Kochi Mangaluru natural gas pipeline 3

ದೇಶದಲ್ಲಿ ನೈಸರ್ಗಿಕ ಅನಿಲದ ಬಳಕೆಯ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲು ಭಾರತ ಸರ್ಕಾರ ಬದ್ಧವಾಗಿದೆ. ‘ಒಂದು ರಾಷ್ಟ್ರ ಒಂದು ಅನಿಲ ಗ್ರಿಡ್’ ರಚನೆಯಲ್ಲಿ ಈ ಯೋಜನೆ ಪ್ರಮುಖ ಮೈಲಿಗಲ್ಲಾಗಿದೆ. ಇಂಧನ ಪೂರೈಕೆಗೆ ಒಂದು ಸಮಗ್ರ ಯೋಜನೆಯನ್ನು ಸರ್ಕಾರ ರೂಪಿಸಿದೆ ಎಂದು ಹೇಳಿದರು.

ಈಗ ಭಾರತದಲ್ಲಿ ನೈಸರ್ಗಿಕ ಅನಿಲ ಬಳಕೆ ಶೇ.6.3 ರಷ್ಟಿದ್ದು, 2030ರ ವೇಳೆಗೆ ಇದನ್ನು ಶೇ.15ಕ್ಕೆ ಹೆಚ್ಚಿಸುವ ಗುರಿಯನ್ನು ಹಾಕಲಾಗಿದೆ. ಒಂದು ದೇಶ ಒಂದು ಗ್ಯಾಸ್ ಗ್ರಿಡ್ ಕಲ್ಪನೆಯು ಪೂರ್ಣಗೊಂಡರೆ ರಸಗೊಬ್ಬರ, ರಾಸಾಯನಿಕ, ಪೆಟ್ರೋಲಿಯಂ ಮತ್ತು ಇಂಧನ ವಲಯಗಳಿಗೆ ಹೆಚ್ಚಿನ ಲಾಭವಾಗಲಿದೆ. ಬಡ, ಮಧ್ಯಮ ವರ್ಗದ ಜನರು ಮತ್ತು ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗಲಿದೆ. ಇದರಿಂದ ಸಾವಿರಾರು ಕೋಟಿ ವಿದೇಶಿ ವಿನಿಮಯ ಮೊತ್ತ ಉಳಿತಾಯವಾಗಲಿದೆ ಎಂದು ಅವರು ತಿಳಿಸಿದರು.

Kochi Mangaluru natural gas pipeline 1

ಕೊಚ್ಚಿ-ಮಂಗಳೂರು ಪೈಪ್ ಲೈನ್ ನಿಂದ ಈ ಭಾಗದ ಕೈಗಾರಿಕೋದ್ಯಮಗಳಿಗೆ ಅನುಕೂಲವಾಗಲಿದೆ. ಜೊತೆಗೆ ವಾಹನಗಳಲ್ಲಿ ಸಿಎನ್‌ಜಿ ಬಳಕೆಗೂ ಉತ್ತೇಜನ ದೊರೆಯಲಿದೆ. ಈ ವ್ಯಾಪ್ತಿಯಲ್ಲಿ ಸುಮಾರು 700 ಸಿಎನ್ ಜಿ ಸ್ಟೇಷನ್ ಗಳನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.

ಕೇಂದ್ರ ಪೆಟ್ರೋಲಿಯಂ ಮತ್ತು ಉಕ್ಕು ಸಚಿವ ಧರ್ಮೇಂದ್ರ ಪ್ರಧಾನ್, ಕರ್ನಾಟಕ ಸಿಎಂ ಯಡಿಯೂರಪ್ಪ, ಕೇರಳ ಸಿಎಂ ಪಿಣರಾಯಿ ವಿಜಯನ್, ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್, ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ, ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ವಿದೇಶಾಂಗ ವ್ಯವಹಾರ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಭಾಗವಹಿಸಿದ್ದರು.

Kochi Mangaluru natural gas pipeline 1

ಕೇರಳದ ಕೊಚ್ಚಿಯಿಂದ ಕರ್ನಾಟಕದ ಮಂಗಳೂರುವರೆಗೆ 450 ಕಿ.ಮೀ ಉದ್ದ ಈ ಗ್ಯಾಸ್ ಪೈಪ್ ಲೈನ್ ಅಳವಡಿಸಲಾಗಿದೆ. ಸುಮಾರು 3000 ಕೋಟಿ ರೂ ವೆಚ್ಚದ ಯೋಜನೆ ಇದಾಗಿದ್ದು, ಪ್ರತಿನಿತ್ಯ 12 ದಶಲಕ್ಷ ಮೆಟ್ರಿಕ್ ಸ್ಟಾಂಡರ್ಡ್ ಕ್ಯುಬಿಕ್ ಮೀಟರ್ ನೈಸರ್ಗಿಕ ಅನಿಲ ಸಾಗಿಸುವ ಸಾಮರ್ಥ್ಯ ಹೊಂದಿದೆ. ರಾಜ್ಯದ ಏಕೈಕ ರಸಗೊಬ್ಬರ ಕಾರ್ಖಾನೆ ಮಂಗಳೂರಿನ ಎಂಸಿಎಫ್‌ ಈಗಾಗಲೇ ಈ ನೈಸರ್ಗಿಕ ಅನಿಲದ ಸಂಪರ್ಕವನ್ನು ಹೊಂದಿದ್ದು, ಮುಂದಿನ ಒಂದು ತಿಂಗಳಲ್ಲಿ ಎಂ.ಆರ್.ಪಿ‌ಎಲ್ ಮತ್ತು ಒ.ಎಂ.ಪಿ.ಎಲ್ ಕಾರ್ಖಾನೆಗೂ ಗ್ಯಾಸ್ ಸಂಪರ್ಕವಾಗಲಿದೆ. ಈ ಮೂಲಕ ಒಂದೇ ರಾಷ್ಟ್ರ, ಒಂದೇ ಗ್ಯಾಸ್ ಗ್ರಿಡ್ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ಈ ಯೋಜನೆಯಿಂದ ಕೇರಳ ಹಾಗೂ ಕರ್ನಾಟಕದ ಮಂಗಳೂರಿನ ಅನಿಲ ಆಧಾರಿತ ಕೈಗಾರಿಕೆಗಳಿಗೆ ಶುದ್ದ ಇಂಧನ ಸಿಗಲಿದೆ. ಗೇಲ್ ಸಂಸ್ಥೆಯೂ ಕಾಮಗಾರಿಯನ್ನು ನಡೆಸುತ್ತಿದ್ದು, ಅನಿಲ ಪೊರೈಕೆ ಮಾಡುತ್ತಿದೆ. ಮುಂದೆ ವಾಹನಗಳಿಗೆ, ಗೃಹ ಬಳಕೆ, ವಾಣಿಜ್ಯ ಬಳಕೆಗೂ ಲಭಿಸುವಂತೆ ಮಾಡಲಿದೆ. ಇದಕ್ಕಾಗಿ ಸದ್ಯ ನೋಂದಣಿ ನಡೆಯುತ್ತಿದ್ದು ವರ್ಷಾಂತ್ಯದೊಳಗೆ ಮಂಗಳೂರು ನಗರದ ಮನೆ ಮನೆಗಳಿಗೂ ಈ ನೈಸರ್ಗಿಕ ಅಡುಗೆ ಅನಿಲ‌ದ ಸಂಪರ್ಕ ಸಿಗಲಿದೆ. ಸದ್ಯ ಎಂ.ಸಿ.ಎಫ್ ತಿಂಗಳಿಗೆ 60 ಕೋಟಿ ರೂಗಳ ಈ ನೈಸರ್ಗಿಕ ಅನಿಲವನ್ನು ಪಡೆಯುತ್ತಿದೆ. ಈ ನೈಸರ್ಗಿಕ ಅನಿಲವು ಅಧಿಕ ಇಂಧನ ದಕ್ಷತೆ ಹೊಂದಿದೆ ಹಾಗೂ ಪರಿಸರ ಸ್ನೇಹಿಯಾಗಿದೆ. ಕೈಗಾರಿಕೆಗಳಿಗೂ ನಫ್ತಾದಂತ ಇಂಧನಕ್ಕಿಂತ ಕಡಿಮೆ ದರದಲ್ಲಿ ಇದು ಸಿಗಲಿದ್ದು, ಕೈಗಾರಿಕಾ ಉತ್ಪನ್ನಗಳ ಖರ್ಚು ಕಡಿಮೆಯಾಗಿ ಲಾಭದಾಯವಾಗಲಿದೆ. ಒಟ್ಟಿನಲ್ಲಿ ಈ ಪೈಪ್‌ಲೈನ್‌ನಿಂದಾಗಿ ಕರಾವಳಿಯ ಉದ್ದಿಮೆಗಳಿಗೆ ಶುದ್ದ ಇಂಧನ ಲಭಿಸಿದಂತಾಗಿದೆ. ಲಕ್ಷಾಂತರ ಮನೆಗಳಿಗೆ ಕಡಿಮೆ ವೆಚ್ಚದಲ್ಲಿ ಅನಿಲ ಪೂರೈಕೆಯಾಗಲಿದೆ.

ಕೇರಳದ ಕೊಚ್ಚಿಯ ದ್ರವೀಕೃತ ನೈಸರ್ಗಿಕ ಅನಿಲ (ಎನ್‌ಎನ್‌ಜಿ)  ಮರುಹೊಂದಾಣಿಕೆ ಟರ್ಮಿನಲ್ ನಿಂದ ಎರ್ನಾಕುಲಂ, ತ್ರಿಶ್ಯೂರ್‌, ಪಾಲಕ್ಕಾಡ್, ಮಲ್ಲಪುರಂ, ಕೋಳಿಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಯ ಮೂಲಕ ಸಾಗಿ  ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿಗೆ ನೈಸರ್ಗಿಕ ಅನಿಲವನ್ನು ಸಾಗಿಸುತ್ತದೆ.

ಪೈಪ್‌ಲೈನ್‌ ನಿರ್ಮಾಣವು 12 ಲಕ್ಷ ಮಾನವ-ದಿನಗಳ ಉದ್ಯೋಗವನ್ನು ಸೃಷ್ಟಿಸಿತ್ತು. ಕೊಳವೆ ಮಾರ್ಗ ಅಳವಡಿಕೆಯು ಎಂಜಿನಿಯರಿಂಗ್ ಸವಾಲಾಗಿತ್ತು, ಏಕೆಂದರೆ ಕೊಳವೆ ಮಾರ್ಗವು 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಜಲಮೂಲಗಳನ್ನು ದಾಟುವುದು ಅನಿವಾರ್ಯವಾಗಿತ್ತು. ಇದನ್ನು ಅಡ್ಡಡ್ಡ ಕೊರೆಯುವ ವಿಧಾನದ ವಿಶೇಷ ತಂತ್ರಜ್ಞಾನದ ಮೂಲಕ ಮಾಡಲಾಯಿತು.

Share This Article
Leave a Comment

Leave a Reply

Your email address will not be published. Required fields are marked *