ಬಳ್ಳಾರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕ ಪಿ.ಟಿ ಪರಮೇಶ್ವರ್ ನಾಯ್ಕ್ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ಮಗನ ಮದುವೆಗೆ ಹೆಚ್ಚು ಜನರನ್ನು ಸೇರಿಸಿದ್ದು ಹಾಗೂ ಮಾಸ್ಕ್ ಧರಿಸದೇ ಇರುವುದಕ್ಕೆ ಪಿಟಿಪಿ ಮೇಲೆ ಸಿದ್ದರಾಮಯ್ಯ ಗರಂ ಆಗಿದ್ದಾರೆ.
ಕಾರಿಂದ ಇಳಿದ ಕೂಡಲೇ ಪಿಟಿಪಿಗೆ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ಪಿಟಿಪಿ ಮಾಸ್ಕ್ ಹಾಕೊಂಡಿಲ್ಲ?. 50 ಜನಕ್ಕಿಂತ ಹೆಚ್ಚು ಸೇರಿಸಿದ್ದೀಯಾ, ಕೇಸ್ ಹಾಕಬೇಕು ನಿನ್ನ ಮೇಲೆ ಎಂದು ಕಿಡಿಕಾರಿದರು. ಈ ವೇಳೆ ಪಿಟಿಪಿ, ಮೀಡಿಯಾದವರು ಇದ್ದಾರೆ ಸುಮ್ನಿರಿ ಸರ್ ಎಂದು ಸುಮ್ಮನಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗ್ರಾಮದ ಲಕ್ಷ್ಮೀಪುರ ತಾಂಡಾದಲ್ಲಿ ಪರಮೇಶ್ವರ್ ನಾಯ್ಕ್ ಮಗನ ಮದುವೆ ನಡೆದಿದೆ. ಮದುವೆಯಲ್ಲಿ ಸಿದ್ದರಾಮಯ್ಯ, ಜಿ. ಪರಮೇಶ್ವರ್ ಹಾಗೂ ಶ್ರೀರಾಮುಲು ಸೇರಿದಂತೆ ಅನೇಕ ಮಂದಿ ಭಾಗಿಯಾಗಿದ್ದರು. ಕೋವಿಡ್ 19 ನಿಯಮಗಳನ್ನು ಉಲ್ಲಂಘಿಸಿ ಮದುವೆಗೆ ಜನ ಸೇರಿದ್ದರು. ಈ ಸಂಬಂಧ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಪಿಟಿಪಿ ವಿರುದ್ಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.