– ಅನುಭವ ಇಲ್ಲದೇ ಇದ್ದರೂ ಒಲಿದು ಬಂತು ಕೋಚ್ ಹುದ್ದೆ
– ಹಳೆ ನೆನಪು ಹಂಚಿಕೊಂಡ ಕರ್ಸ್ಟನ್
ನವದೆಹಲಿ: ಟೀ ಇಂಡಿಯಾದ ಯಶಸ್ವಿ ಕೋಚ್ ಎಂದೇ ಪ್ರಖ್ಯಾತಿ ಪಡೆದಿರುವ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್ ಕೇವಲ ಏಳು ನಿಮಿಷದಲ್ಲಿ ಹುದ್ದೆಯನ್ನು ಅಲಕರಿಸಿದ್ದರಂತೆ.
ಹೌದು. ಮಾಜಿ ಆರಂಭಿಕ ಆಟಗಾರ ಗ್ಯಾರಿ ಕರ್ಸ್ಟನ್ ಈ ಹಿಂದೆ ಕೋಚ್ ಆಗಿ ನೇಮಕಗೊಂಡ ಸ್ವಾರಸ್ಯಕರ ವಿಚಾರವನ್ನು ಈಗ ಹಂಚಿಕೊಂಡಿದ್ದಾರೆ. ಈ ವೇಳೆ ಮೇಲ್ ಬಂದಾಗ ಏನಾಯ್ತು, ಸಂದರ್ಶನದ ವೇಳೆ ಯಾರು ಏನು ಪ್ರಶ್ನೆ ಕೇಳಿದ್ದರು? ಎಲ್ಲವನ್ನು ಈಗ ವಿವರಿಸಿದ್ದಾರೆ.
Advertisement
Advertisement
ಆಸ್ಟ್ರೇಲಿಯಾದ ಗ್ರೇಗ್ ಚಾಪೆಲ್ 2005ರಿಂದ 2007ರವರೆಗೆ ಕೋಚ್ ಆಗಿದ್ದರು. ಈ ವೇಳೆ ಆಟಗಾರರ ಮತ್ತು ಕೋಚ್ ನಡುವೆ ಹೊಂದಾಣಿಕೆ ಸರಿಯಾಗದ ಕಾರಣ ಬಿಸಿಸಿಐ ಹೊಸ ಕೋಚ್ ನೇಮಕ ಮಾಡಲು ಸುನಿಲ್ ಗವಾಸ್ಕರ್, ರವಿಶಾಸ್ತ್ರಿಯನ್ನು ಒಳಗೊಂಡ ಆಯ್ಕೆ ಸಮಿತಿಯನ್ನು ನೇಮಿಸಿತ್ತು.
Advertisement
ಕರ್ಸ್ಟನ್ ನೆನಪು ಹಂಚಿಕೊಂಡದ್ದು ಹೀಗೆ
“ಒಂದು ದಿನ ಹಿರಿಯ ಕ್ರಿಕೆಟ್ ಆಟಗಾರ ಸುನಿಲ್ ಗವಾಸ್ಕರ್ ನನಗೆ ಇಮೇಲ್ ಮಾಡಿ, ಟೀಂ ಇಂಡಿಯಾ ಕೋಚ್ ಹುದ್ದೆಗೆ ನಿಮ್ಮನ್ನು ಪರಿಗಣಿಸಬಹುದೇ” ಎಂದು ಕೇಳಿದ್ದರು. ಇಮೇಲ್ ನೋಡಿ,”ಯಾರೋ ಆನ್‌ಲೈನ್ ವಂಚಕರು ಮೇಲ್ ಮಾಡಿರಬಹುದು” ಎಂದು ಭಾವಿಸಿ ನಾನು ಉತ್ತರ ನೀಡದೇ ಸುಮ್ಮನ್ನಾಗಿದ್ದೆ. ಆದರೆ ಗವಾಸ್ಕರ್ ಅವರಿಂದ ಮತ್ತೊಂದು ಇಮೇಲ್ ಬಂದಿತ್ತು. “ಇದರಲ್ಲೂ ನೀವು ಸಂದರ್ಶನಕ್ಕೆ ಬರಬಬಹುದೇ” ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರು.
Advertisement
ಈ ಇಮೇಲ್ ಅನ್ನು ಪತ್ನಿಗೆ ತೋರಿಸಿದಾಗ ಆಕೆ, “ತಪ್ಪಾದ ವ್ಯಕ್ತಿಗೆ ಮೇಲ್ ಸೆಂಡ್ ಮಾಡಿದ್ದಾರೆ” ಎಂದು ಹೇಳಿದ್ದಳು. ನಿಜವಾಗಿಯೂ ನಾನು ಕೋಚ್ ಆಗಲು ಆಸಕ್ತಿ ಇರಲಿಲ್ಲ. ಅಷ್ಟೇ ಅಲ್ಲದೇ ಅನುಭವ ಸಹ ಇರಲಿಲ್ಲ. ಆದರೂ ನೋಡಿಯೋ ಬೀಡೋಣ ಎಂದು ತೀರ್ಮಾನಿಸಿ ಸಂದರ್ಶನಕ್ಕೆ ಹಾಜರಾದೆ.
ಈ ಸಂದರ್ಭದಲ್ಲಿ ಅನಿಲ್ ಕುಂಬ್ಳೆ ನನಗೆ ಸಿಕ್ಕಿದರು. ಟೀಂ ಇಂಡಿಯಾದ ನಾಯಕರಾಗಿದ್ದ ಕುಂಬ್ಳೆ ನನ್ನನ್ನು ನೋಡಿ,”ಇಲ್ಲಿ ಏನು ಮಾಡುತ್ತಿದ್ದೀರಿ?” ಎಂದು ಪ್ರಶ್ನಿಸಿದರು. ಅದಕ್ಕೆ ನಾನು,”ಕೋಚ್ ಹುದ್ದೆಯ ಸಂದರ್ಶನಕ್ಕೆ ಬಂದಿದ್ದೇನೆ. ಮುಂದೆ ನಾನೇ ನಿಮಗೆ ಮಾರ್ಗದರ್ಶನ ನೀಡಲಿದ್ದೇನೆ” ಎಂದು ಹೇಳಿದಾಗ ಕುಂಬ್ಳೆ ನಕ್ಕರು. ನನಗೂ ನಗುವನ್ನು ತಡೆಯಲು ಆಗಲಿಲ್ಲ.
ಅನುಭವ ಇಲ್ಲದ ಕಾರಣ ನಾನು ಯಾವುದೇ ತಯಾರಿ ಇಲ್ಲದೇ ಸಂದರ್ಶನಕ್ಕೆ ಹಾಜರಾಗಿದ್ದೆ. ರವಿಶಾಸ್ತ್ರಿ ಅವರು, “ದಕ್ಷಿಣ ಆಫ್ರಿಕಾ ತಂಡ ಭಾರತವನ್ನು ಹೇಗೆ ಮಣಿಸಬಹುದು” ಎಂದು ಪ್ರಶ್ನಿಸಿದರು. ಇದಕ್ಕೆ ನಾನು ನಮ್ಮ ತಂಡದ ತಂತ್ರಗಳನ್ನು ಹೇಳದೇ ಮೂರು ನಿಮಿಷದಲ್ಲಿ ಉತ್ತರ ನೀಡಿದ್ದೆ. ಈ ಉತ್ತರ ಎಲ್ಲರಿಗೂ ಖುಷಿ ನೀಡಿತು. ಇದಾದ ನಾಲ್ಕು ನಿಮಿಷಕ್ಕೆ ಒಪ್ಪಂದದ ಪತ್ರ ನನ್ನ ಕೈ ಸೇರಿತ್ತು.
ಪತ್ರ ಸಿಕ್ಕಿದ ಕೂಡಲೇ ಓದಲು ಆರಂಭಿಸಿದೆ. ಮೊದಲ ಪುಟದಲ್ಲಿ ನನ್ನ ಹೆಸರು ಇರಲಿಲ್ಲ. ಬದಲಾಗಿ ಗ್ರೇಗ್ ಚಾಪೆಲ್ ಹೆಸರು ಇತ್ತು. ಗಮನಕ್ಕೆ ಬಂದ ಕೂಡಲೇ ಬಿಸಿಸಿಐ ಕಾರ್ಯದರ್ಶಿಗೆ ನನ್ನ ಹೆಸರು ಇದರಲ್ಲಿ ಇಲ್ಲ. ನೀವು ಹಳೆಯ ಪತ್ರ ನೀಡಿದ್ದೀರಿ ಎಂದು ತಿಳಿಸಿದೆ. ಬಳಿಕ ಅವರು ಪತ್ರವನ್ನು ಓದಿ ಚಾಪೆಲ್ ಹೆಸರನ್ನು ಅಳಿಸಿ ನನ್ನ ಹೆಸರನ್ನು ಬರೆದು ಹಿಂತಿರುಗಿಸಿದ್ದರು ಎಂದು ಹಳೆಯ ನೆನಪುಗಳನ್ನು ಗ್ಯಾರಿ ಕರ್ಸ್ಟನ್ ಹಂಚಿಕೊಂಡಿದ್ದಾರೆ.
ಕರ್ಸ್ಟನ್ ಅವರು 2008ರಲ್ಲಿ ಕೋಚ್ ಹುದ್ದೆ ಅಲಂಕರಿಸಿದ ಬಳಿಕ ಭಾರತ ತಂಡವು ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ(2009) ಮೊದಲ ಸ್ಥಾನಕ್ಕೆ ಏರಿತ್ತು. 2011ರಲ್ಲಿ ಭಾರತದಲ್ಲೇ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು. ಈ ವೇಳೆ ಟೀಂ ಇಂಡಿಯಾ ಆಟಗಾರರು ಕರ್ಸ್ಟನ್ ಅವರನ್ನು ಎತ್ತಿಕೊಂಡು ಕುಣಿದಾಡಿದ್ದರು.
ಟೀಂ ಇಂಡಿಯಾ ಆಟಗಾರರಲ್ಲಿ ಹೊಂದಾಣಿಕೆ ಇಲ್ಲ. ಡ್ರೆಸ್ಸಿಂಗ್ ರೂಂ ವಾತಾವರಣ ಸರಿ ಇಲ್ಲ ಎಂಬ ಆರೋಪಗಳು ಕೇಳಿ ಬಂದಿತ್ತು. ಆದರೆ ಕರ್ಸ್ಟನ್ ಆಯ್ಕೆ ಆದ ಬಳಿಕ ಟೀಂ ಇಂಡಿಯಾದ ಸ್ವರೂಪವೇ ಬದಲಾಯಿತು. ಆಟಗಾರರಿಗೆ ಪ್ರೋತ್ಸಾಹ ನೀಡುತ್ತಿದ್ದ ಕಾರಣ ಇಂದು ತಂಡ ಮೇಲೆ ಉತ್ತಮ ಪರಿಣಾಮ ಬೀರಿತ್ತು. 2018ರಲ್ಲಿ ಐಪಿಎಲ್ ಸರಣಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಆಗಿ ಆಯ್ಕೆ ಆಗಿದ್ದರು.