ಕೊಪ್ಪಳ: ಕೇಂದ್ರ ಸರ್ಕಾರ ಕತ್ತೆಯ ಮುಂದೆ ಹುಲ್ಲು ಕಟ್ಟಿದಂತೆ ನಡೆದುಕೊಳ್ಳುತ್ತಿದೆ. ಅಚ್ಚೆ ದಿನ್, ಅಚ್ಚೆ ದಿನ್ ಎಂದು ಹೇಳುತ್ತಾ ಮಾತಿನಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಟೀಕಿಸಿದ್ದಾರೆ.
Advertisement
ಕೊಪ್ಪಳದ ಕುಷ್ಟಗಿಯಲ್ಲಿ ಅಲೆಮಾರಿ ಜನಾಂಗದವರಿಗೆ ಆಹಾರ ಕಿಟ್ ವಿತರಿಸಿದ ಬಳಿಕ ಮಾತನಾಡಿದ ಅವರು, ಅಚ್ಛೆದಿನ್ ಯಾರಿಗೆ ಬಂದಿದೆ ಎಂದು ಪ್ರಶ್ನಿಸಿದರು. ನಮಗ್ಯಾರಿಗೂ ಅಚ್ಛೆದಿನ್ ಬಂದಿಲ್ಲ. 7 ವರ್ಷದಲ್ಲಿ ಕೇಂದ್ರ ಸಾಧನೆ ಏನು? 70 ವರ್ಷದಲ್ಲಿ ಮಾಡಿದಿರುವ ಸಾಧನೆ ಮಾಡಿದ್ದೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಈ ಸಾಧನೆ ಏನು ಎಂಬುವುದನ್ನು ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.
Advertisement
Advertisement
ಲಾಕ್ ಡೌನ್ ಮಾಡಿದರೂ ಕೊರೊನಾ ನಿಯಂತ್ರಿಸಲಾಗಿಲ್ಲ. ಕೊರೊನಾ ನಿಯಂತ್ರಿಸಲು ರಾಜ್ಯ ಹಾಗೂ ಕೇಂದ್ರ ಸರಕಾರಗಳು ವಿಫಲವಾಗಿವೆ. ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಬಡವರ ನೆರವಿಗೆ ಬರಬೇಕಿತ್ತು. ವ್ಯಾಕ್ಸಿನ್ ಹಾಕಬೇಕಿತ್ತು. ವ್ಯಾಕ್ಸಿನ್ ನಲ್ಲಿ ಕಾಂಗ್ರೆಸ್ ರಾಜಕಾರಣ ಮಾಡಿದೆ ಎನ್ನುತ್ತಾರೆ. ಆದರೆ ಕಾಂಗ್ರೆಸ್ ಅವುಗಳ ಪರೀಕ್ಷೆ ಮಾಡಲು ಹೇಳಿದ್ದು ಸತ್ಯ. ಈಗ ವ್ಯಾಕ್ಸಿನ್ ಹಾಕಿಸಿಕೊಂಡು ಎಲ್ಲರೂ ಹಾಕಿಸಿಕೊಳ್ಳಲು ಹೇಳುತ್ತಿದ್ದೇವೆ. ಕೇವಲ ನೂರು ರೂಪಾಯಿಯ ವ್ಯಾಕ್ಸಿನ್ ನಲ್ಲಿ ಪ್ರಚಾರ ಪಡೆಯಲು ಬಿಜೆಪಿ ಮುಂದಾಗಿದೆ. ವ್ಯಾಕ್ಸಿನ್ ಮುಕ್ತ ಮಾರುಕಟ್ಟೆ ಗೆ ಬಂದರೆ ಎಲ್ಲರೂ ಹಾಕಿಸಿಕೊಳ್ಳುತ್ತಾರೆ ಎಂದರು.