– 5 ಸ್ಟಾರ್ ಸಂಸ್ಕೃತಿ ಬದಲಾಗುವ ತನಕ ಗೆಲುವು ಸಾಧ್ಯವಿಲ್ಲ
– ಪಕ್ಷದ ರಚನೆಯೇ ಕುಸಿದು ಬಿದ್ದಿದೆ
ನವದೆಹಲಿ: ಕಾಂಗ್ರೆಸ್ ಪುನರುಜ್ಜೀವನಕ್ಕಾಗಿ ಆಳವಾದ ರಚನಾತ್ಮಕ ಸುಧಾರಣೆಗಳ ಅಗತ್ಯವಿದೆ ಎಂದು ಪಕ್ಷದ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಅವರು, ಕಾಂಗ್ರೆಸ್ ಕ್ರಮೇಣ ಕ್ಷೀಣಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದೊಳಗೆ ಯಾವುದೇ ಅಸಮಾಧಾನವಿಲ್ಲ. ಆದರೆ ಪಕ್ಷ ಕಾರ್ಯಕರ್ತರಿಂದ ಹಿಡಿದು ಉನ್ನತ ನಾಯಕತ್ವದವರೆಗೆ ತಮ್ಮ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳುವ ತುರ್ತು ಅಗತ್ಯವಿದೆ ಎಂದರು.
Advertisement
Advertisement
ಪಕ್ಷದ ರಚನೆಯೇ ಕುಸಿದು ಬಿದ್ದಿದೆ. ಇದನ್ನು ಮರುಸ್ಥಾಪಿಸಬೇಕಾದರೆ ನಾಯಕರು ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು. ನಾಯಕತ್ವದ ಬದಲಾವಣೆಯಿಂದ ನಾವು ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ವಿವಿಧೆಡೆ ಗೆಲ್ಲುತ್ತೇವೆ ಎಂಬುದು ತಪ್ಪು. ವ್ಯವಸ್ಥೆ ಬದಲಾದಾಗ ಮಾತ್ರ ಇದು ಸಾಧ್ಯವಾಗಲಿದೆ. ಬಿಹಾರ ಚುನಾವಣೆಯಲ್ಲಿ ಪಕ್ಷ ಕಳಪೆ ಪ್ರದರ್ಶನ ನೀಡಿದೆ ಎಂದು ಹೇಳಿದರು.
Advertisement
Advertisement
5 ಸ್ಟಾರ್ ಸಂಸ್ಕೃತಿ ತಾಂಡವಾಡುತ್ತಿದೆ
ಪಕ್ಷದ ಪದನಕ್ಕೆ ಹಾಗೂ ನಾಯಕರ ಅವನತಿಗೆ ಸೈಕೋಫನ್ಸಿ ಸಂಸ್ಕೃತಿ ಪ್ರಮುಖ ಕಾರಣ. ನಾವು ಈ ಸಂಸ್ಕೃತಿಯಿಂದ ದೂರ ಇರಬೇಕು. ರಾಜಕೀಯ ಒಂದು ತಪಸ್ಸು. ಶೋಕಿ ಹಾಗೂ ಹಣ ಮಾಡುವುದಕ್ಕಾಗಿ ರಾಜಕೀಯಕ್ಕೆ ಸೇರುತ್ತಿರುವವರಿಗೆ ನಾಚಿಕೆಯಾಗಬೇಕು ಎಂದರು.
ಮತದಾನವನ್ನು 5 ಸ್ಟಾರ್ ಸಂಸ್ಕೃತಿಯಿಂದ ಗೆಲ್ಲಲು ಸಾಧ್ಯವಿಲ್ಲ. ಇಂದಿನ ನಾಯಕರ ಸಮಸ್ಯೆ ಎಂದರೆ ಪಕ್ಷದ ಟಿಕೆಟ್ ಸಿಕ್ಕ ತಕ್ಷಣ ಮೊದಲು 5 ಸ್ಟಾರ್ ಹೋಟೆಲ್ ಬುಕ್ ಮಾಡುತ್ತಾರೆ. ಒರಟು ರಸ್ತೆಗಳಲ್ಲಿ ಅವರು ಹೋಗುವುದಿಲ್ಲ. 5 ಸ್ಟಾರ್ ಸಂಸ್ಕೃತಿಯನ್ನು ತ್ಯಜಿಸುವವರೆಗೆ ಒಬ್ಬರೂ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಕಾರ್ಯಕರ್ತರು ಕೆಲಸ ಮಾಡುವ ವಿಧಾನವನ್ನು ಬದಲಿಸಬೇಕಿದೆ. ಒಂದು ಹಂತದವರೆಗೆ ನಾವು ಕೆಲಸದ ವಿಧಾನವನ್ನು ಬದಲಿಸುತ್ತೇವೆ. ಆದರೆ ವಿಷಯಗಳು ಬದಲಾಗಲ್ಲ. ನಾಯಕತ್ವ ಹೊಂದಿರುವವರು ಕಾರ್ಯಕರ್ತರಿಗೆ ಕೆಲಸ ನೀಡಬೇಕು. ಹುದ್ದೆಗಳಿಗೆ ಚುನಾವಣೆ ನಡೆಸಬೇಕು. ನೀವು ಇಲ್ಲದಿದ್ದಾಗ ನಾಯಕತ್ವ ನಿಮಗಾಗಿ ಹುಡುಕುವಂತಿರಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.