– ಭವನಂ ಸನ್ನಿಧಾನಂ ಅಭಿಯಾನಕ್ಕೆ ಭಾರೀ ಬೆಂಬಲ
ಉಡುಪಿ: ಕೇರಳ ಸರ್ಕಾರದ ವಿರುದ್ಧ ಉಡುಪಿಯ 70 ಸಾವಿರ ಅಯ್ಯಪ್ಪ ಭಕ್ತರು ಆಕ್ರೋಶಗೊಂಡಿದ್ದಾರೆ. ಶಬರಿಮಲೆ ಪ್ರವೇಶ ಮುನ್ನ ಎರಡು ಬಾರಿ ಕೋವಿಡ್ ಟೆಸ್ಟ್ ನಿಯಮ ರೂಪಿಸಿರುವ ಪಿಣರಾಯಿ ಸರ್ಕಾರದ ವಿರುದ್ಧ ಉಡುಪಿಯಲ್ಲಿ ಭವನಂ ಸನ್ನಿಧಾನಂ ಅಭಿಯಾನ ಶುರುವಾಗಿದೆ.
ಉಡುಪಿ ಜಿಲ್ಲೆಯಿಂದ ಪ್ರತಿವರ್ಷ 70 ಸಾವಿರಕ್ಕಿಂತಲೂ ಹೆಚ್ಚು ಮಂದಿ ಕೇರಳದ ಶಬರಿಮಲೆಗೆ ಧಾರ್ಮಿಕ ಯಾತ್ರೆ ಮಾಡುತ್ತಾರೆ. ಜನವರಿ ತಿಂಗಳಲ್ಲಿ ಮಕರ ಸಂಕ್ರಾಂತಿಯ ಜ್ಯೋತಿ ದರ್ಶನಕ್ಕೆ 40 ಸಾವಿರಕ್ಕಿಂತಲೂ ಹೆಚ್ಚು ಭಕ್ತರು ತೆರಳುತ್ತಾರೆ. ವಿಶ್ವಾದ್ಯಂತ ವ್ಯಾಪಿಸಿರುವ ಕೊರೊನಾ ಮಹಾಮಾರಿ ರೋಗದಿಂದ ಈ ಬಾರಿ ಶಬರಿಮಲೆ ಪ್ರವೇಶ ಕಷ್ಟಕರವಾಗಿದೆ. ಕೇರಳ ಸರ್ಕಾರ ಲೆಕ್ಕಕ್ಕಿಂತ ಹೆಚ್ಚು ನಿಯಮಾವಳಿಗಳನ್ನು ವಿಧಿಸಿದೆ. ಕರ್ನಾಟಕದಿಂದ ತೆರಳುವ ಭಕ್ತರು ಕೋವಿಡ್ ಟೆಸ್ಟ್ ಮಾಡಿರಬೇಕು. ನೀಲಕಲ್ ಎಂಬಲ್ಲಿ ಇನ್ನೊಂದು ಕೋವಿಡ್ ಟೆಸ್ಟ್ ಮಾಡಿಸಬೇಕು. ಪಂಪಾ ನದಿ ತೀರದಲ್ಲಿ ಮತ್ತೊಂದು ಬಾರಿ ಟೆಸ್ಟ್ ಮಾಡಿಸಬೇಕು ಎಂದಿದೆ. ಈ ದುಬಾರಿ ನಿಯಮ ಉಡುಪಿಯ ಅಯ್ಯಪ್ಪ ಭಕ್ತರನ್ನ ಕೆರಳಿಸಿದೆ.
ಇಷ್ಟೆಲ್ಲಾ ನಿಯಮಾವಳಿಯ ಸಹವಾಸವೇ ಬೇಡ ಅಂತ ಪಂದಳಕಂದನ ಸನ್ನಿಧಾನಕ್ಕೆ ತೆರಳದೆ ‘ಭವನಂ ಸನ್ನಿಧಾನಂ’ ಅಭಿಯಾನವನ್ನು ಉಡುಪಿಯಲ್ಲಿ ಶುರುಮಾಡಿದ್ದಾರೆ. ಈ ಅಭಿಯಾನದ ಪ್ರಕಾರ ಮನೆಯಲ್ಲೇ ಇದ್ದು ಕುಟುಂಬ ಸಮೇತ ಅಯ್ಯಪ್ಪಾರಾಧನೆ ಮಾಡಲು ನಿರ್ಧರಿಸಿದ್ದಾರೆ. ಎರಡೆರಡು ಕೋವಿಡ್ ಟೆಸ್ಟ್ ಮಾಡಲಿರುವ, ಇರುಮುಡಿ ವಾಪಾಸ್ ಕೊಡದ, ಭಕ್ತರ ತುಪ್ಪ ಸ್ವೀಕರಿಸದ, ಊಟದ ವ್ಯವಸ್ಥೆ ಮಾಡದ ದೇಗಲ ಆಡಳಿತ ಮಂಡಳಿ, ಕೇರಳ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಕೇರಳದ ಬಳಿ ಕಾಸಿಲ್ಲದಿದ್ದರೆ ಅಕೌಂಟ್ ನಂಬರ್ ಕಳುಹಿಸಿ. ಭಕ್ತರ ಭಾವನೆಗೆ ಜೊತೆ ವ್ಯವಹಾರ ಮಾಡಬೇಡಿ ಅಂತ ತಿರುಗೇಟು ಕೊಟ್ಟಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಯ್ಯಪ್ಪ ಭಕ್ತ ದಯಾಕರ್, ಹಿಂದೂಗಳ ಧಾರ್ಮಿಕ ಭಾವನೆಯನ್ನು ಕೇರಳ ಸರ್ಕಾರ ಚೆಲ್ಲಾಟವಾಡುತ್ತಿದೆ. ಮೂರು ಮೂರು ಬಾರಿ ಕೋವಿಡ್ ಟೆಸ್ಟ್ ಮಾಡುವ ಅವಶ್ಯಕತೆ ಏನಿದೆ. ಸರ್ಕಾರದ ಬಳಿ ಕಾಸಿಲ್ಲದಿದ್ದರೆ ಅಕೌಂಟ್ ನಂಬರ್ ಕೊಡಿ ನಾವು ಇಲ್ಲಿಂದಲೇ ನಮ್ಮ ಕಾಣಿಕೆಗಳನ್ನು ಹಾಕುತ್ತೇವೆ. ಕೊರೊನಾದ ಹೆಸರಿನಲ್ಲಿ ಹಣ ಲೂಟಿ ಮಾಡಬೇಡಿ ಎಂದಿದ್ದಾರೆ.
ಮಲ್ಪೆ ಅಯ್ಯಪ್ಪಸ್ವಾಮಿ ಮಂದಿರದ ಅಧ್ಯಕ್ಷ ಆರ್.ಕೆ ಮಲ್ಪೆ ಮಾತನಾಡಿ, ಉಡುಪಿ ಜಿಲ್ಲೆಯ ಅಯ್ಯಪ್ಪ ಮಾಲಾಧಾರಿಗಳು ದಕ್ಷಿಣ ಕನ್ನಡ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಯ ಲಕ್ಷಾಂತರ ಅಯ್ಯಪ್ಪ ಭಕ್ತರು ನಮ್ಮ ಅಭಿಯಾನದ ಜೊತೆ ಕೈಜೋಡಿಸಿದ್ದಾರೆ. ಅಯ್ಯಪ್ಪ ಮಂದಿರಗಳಲ್ಲಿ ವಿಶೇಷ ಪೂಜೆಗಳನ್ನು ಆಯೋಜಿಸುವುದು ಅನ್ನಸಂತರ್ಪಣೆ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ಯಾವುದೇ ಶಿಬಿರಗಳನ್ನು ಮಾಡದೆ ಮನೆಗಳಲ್ಲೇ ಅಯ್ಯಪ್ಪ ದೇವರನ್ನ ಕುಟುಂಬ ಸಮೇತವಾಗಿ ನಿಯಮ ನಿಷ್ಠೆಯಿಂದ ಆರಾಧಿಸಲು ತೀರ್ಮಾನಿಸಿರುವುದಾಗಿ ಹೇಳಿದ್ದಾರೆ.