ತಿರುವನಂತಪುರ: ಕೇರಳದ ವಿಧಾನಸಭಾ ಚುನಾವಣೆಯ ಇತಿಹಾಸದಲ್ಲೇ ಮೊದಲ ಬಾರಿಗೆ ತೃತೀಯ ಲಿಂಗಿ ಅನನ್ಯಾ ಕುಮಾರಿ ಅಲೆಕ್ಸಾ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಇದೀಗ ಅವರಿಗೆ ಮಾನಸಿಕ ಕಿರುಕುಳ, ಪ್ರಾಣ ಬೆದರಿಕೆ ಇರುವುದಾಗಿ ಕಾರಣಕೊಟ್ಟು ಕೊನೆ ಕ್ಷಣದಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.
ಅಲೆಕ್ಸಾ ಅವರು ಡೆಮಾಕ್ರಟಿಕ್ ಸೋಷಿಯಲ್ ಜಸ್ಟೀಸ್ ಪಕ್ಷದ ಅಭ್ಯರ್ಥಿಯಾಗಿ ಕೇರಳದ ವೆಂಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದರು. ಆದರೆ ಇದೀಗ ನಾಮಪತ್ರ ಹಿಂಪಡೆಯುವ ಮೂಲಕ ಚುನಾವಣೆಯಿಂದ ಹೊರಬಂದಿದ್ದಾರೆ. ವೆಂಗರ ಕ್ಷೇತ್ರದಿಂದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್(ಯು.ಡಿಎಫ್)ಪಕ್ಷದ ಹಿರಿಯ ಅಭ್ಯರ್ಥಿ ಪಿ.ಕೆ ಕುನ್ಹಾಲಿಕುಟ್ಟಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿ ಪಿ. ಜಿಜಿ, ಎಡ ಡೆಮಾಕ್ರಟಿಕ್ ಫ್ರಂಟ್( ಎಲ್‍ಡಿಎಫ್) ಪರವಾಗಿ ಸ್ಪರ್ಧಿಸಿದ್ದರು.
ಈ ಕುರಿತು ಸ್ಥಳೀಯ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಡೆಮಾಕ್ರಟಿಕ್ ಸೋಷಿಯಲ್ ಜಸ್ಟೀಸ್ ಪಕ್ಷದ ಅಭ್ಯರ್ಥಿಯಾಗಿದ್ದ ಅಲೆಕ್ಸಾ ಅವರು, ಚುನಾವಣೆಯ ಪ್ರಚಾರದ ವೇಳೆ ಡೆಮಾಕ್ರಟಿಕ್ ಫ್ರಂಟ್ ಪಕ್ಷದ ಹಿರಿಯ ಅಭ್ಯರ್ಥಿ ಪಿ.ಕೆ ಕುನ್ಹಾಲಿಕುಟ್ಟಿ ಅವರ ವಿರುದ್ಧ ಆರೋಪ ಮಾಡಬೇಕಾಗಿ ತಿಳಿಸಿದ್ದರು. ಇದನ್ನು ಒಪ್ಪದ ನನಗೆ ನಮ್ಮ ಪಕ್ಷದಿಂದಲೇ ಮಾನಸಿಕ ಒತ್ತಡ ಬಂದಿದೆ. ಹಾಗಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದರು.
ಡೆಮಾಕ್ರಟಿಕ್ ಸೋಷಿಯಲ್ ಜಸ್ಟೀಸ್ ಪಕ್ಷದ ಅಭ್ಯರ್ಥಿಯಾಗಿ ವೆಂಗರ ಕ್ಷೇತ್ರದಿಂದ ಸ್ಪರ್ಧಿಸುವಂತೆ ನನಗೆ ಪಕ್ಷದಿಂದ ಮೊದಲು ಕರೆಬಂತು. ಆದರೆ ಮೊದಲು ನಾನು ಇದನ್ನು ಒಪ್ಪಿಕೊಂಡೆ. ನಂತರ ಇದರಲ್ಲಿದ್ದ ಕೆಲವು ಹುಳುಕುಗಳು ನನಗೆ ತಿಳಿಯಿತು. ಹಾಗಾಗಿ ಇದರಿಂದ ಸಮಸ್ಯೆಗೆ ಒಳಗಾಗಲು ನಾನು ಬಯಸುವುದಿಲ್ಲ ಎಂದರು.
ಅನನ್ಯಾ ಕುಮಾರಿ ಅಲೆಕ್ಸಾ ಕೇರಳದ ಮೊದಲ ತೃತೀಯ ಲಿಂಗಿ ರೇಡಿಯೋ ಜಾಕಿ ಆಗಿ ಕೆಲಸನಿರ್ವಹಿಸುತ್ತಿದ್ದರು. ಇವರು ಮೇಕಪ್ ಕಲಾವಿದೆಯಾಗಿ ಮತ್ತು ಖಾಸಗಿ ನ್ಯೂಸ್ ಚಾನಲ್‍ಗಳಲ್ಲಿ ಆ್ಯಂಕರ್ ಆಗಿ ಕೆಲಸ ಮಾಡುತ್ತಿದ್ದರು.
ಕೇರಳದಲ್ಲಿ ಮೊದಲ ಹಂತದ ಚುನಾವಣೆ ಏಪ್ರಿಲ್ 6ರಂದು ಪ್ರಾರಂಭಗೊಳ್ಳಲಿದ್ದು, ಮೇ 2 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.