– ದೆಹಲಿಯಲ್ಲಿ ವರಿಷ್ಠರ ತಂತ್ರಗಾರಿಕೆ
ನವದೆಹಲಿ: ಕೇರಳ ವಿಧಾನಸಭಾ ಚುನಾವಣೆಗೆ ದೆಹಲಿಯಲ್ಲಿ ಬಿಜೆಪಿ ವರಿಷ್ಠರ ತಂತ್ರಗಾರಿಕೆ ಹಿನ್ನೆಲೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನಿವಾಸದಲ್ಲಿ ಮಹತ್ವದ ಸಭೆ ನಡೆಯಿತು.
ಈ ಬಾರಿ ಕೇರಳ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಶತಾಯಗತಾಯ ಹೆಚ್ಚು ಸ್ಥಾನಗಳಿಸುವ ಗುರಿ ಇಟ್ಟುಕೊಂಡಿದೆ. ಇತ್ತೀಚೆಗೆ ಕರ್ನಾಟಕದವರಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಕೇರಳ ಚುನಾವಣೆಯ ಪ್ರಭಾರಿಯಾಗಿ ಬಿಜೆಪಿ ಹೈಕಮಾಂಡ್ ನೇಮಕ ಮಾಡಿತ್ತು. ಡಿಸಿಎಂ ಡಾ. ಅಶ್ವತ್ಥ್ ನಾರಾಯಣ ಅವರನ್ನು ಸಹಪ್ರಭಾರಿಯಾಗಿ ನಿಯೋಜಿಸಲಾಗಿದೆ. ಕೆಲವು ದಿನಗಳ ಹಿಂದೆ ಜೆಪಿನಡ್ಡಾ ಕೇರಳಕ್ಕೆ ಭೇಟಿ ನೀಡಿ ಪಕ್ಷದ ರ್ಯಾಲಿಯಲ್ಲಿ ಭಾಗಿವಹಿಸಿದ್ದರು.
ಕೇರಳ ಭೇಟಿಯ ಬಳಿಕ ನಡ್ಡಾ ಕರೆದಿದ್ದ ಈ ಸಭೆಯಲ್ಲಿ ಮುಖಂಡರು ಭಾಗವಹಿಸಿ ಚರ್ಚಿಸಿದರು. ಪ್ರಭಾರಿಗಳ ಈ ಪ್ರಥಮ ಸಭೆಯಲ್ಲಿ ಚುನಾವಣಾ ತಂತ್ರಗಾರಿಯ ಕುರಿತು ಮಹತ್ವದ ಚರ್ಚೆಗಳು ನಡೆದವು. ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ, ಕೇಂದ್ರ ಸಚಿವರಾದ ವಿಕೆಸಿಂಗ್, ಕಿಷನ್ ರೆಡ್ಡಿ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.