ತಿರುವನಂತಪುರ: ಏಪ್ರಿಲ್ 6ರಂದು ನಡೆಯಲಿರುವ ಕೇರಳ ವಿಧಾನಸಭೆ ಚುನಾವಣೆಯ ಬಿಜೆಪಿ ಸಹ ಪ್ರಭಾರಿ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಬೆಳಗ್ಗೆಯಿಂದ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಸಂಜೆ ವೇಳೆ ಕೋವಳಂ ಬೀಚ್‍ನಲ್ಲಿ ಕೆಲ ಕಾಲ ವಾಕ್ ಮಾಡಿದರು.
ಬೆಳಗ್ಗೆ ಉಪಹಾರ ಸಮಯದಿಂದಲೇ ವಿವಿಧ ನಾಯಕರು, ಜಿಲ್ಲೆಗಳ ಮುಖಂಡರು, ಚುನಾವಣಾ ತಂತ್ರಗಾರಿಕೆ ತಂಡಗಳೊಂದಿಗೆ ನಿರಂತರ ಸಭೆ ನಡೆಸಿದರು. ಬಹಿರಂಗ ಪ್ರಚಾರ, ನಂತರ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಸೂಚನೆ ನೀಡಿದರು.
ಈ ನಡುವೆ ಕೇರಳಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರೊಂದಿಗೂ ಮಾತುಕತೆ ನಡೆಸಿದರು. ಮಧ್ಯಾಹ್ನ 2.30ರ ವರೆಗೆ ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡರು.
ಕೋವಳಂ ಬೀಚ್‍ನಲ್ಲಿ ವಾಕಿಂಗ್:
ಬಿಡುವಿಲ್ಲದ ಕಾರ್ಯಕ್ರಮದಲ್ಲಿ ತೊಡಗಿದ್ದ ಡಿಸಿಎಂ ಡಾ.ಅಶ್ವಥ್ ನಾರಾಯಣ್, ಸಂಜೆ ಹೊತ್ತಿಗೆ ಪ್ರಸಿದ್ಧ ಕೋವಳಂ ಬೀಚ್‍ಗೆ ತೆರಳಿ ಕೆಲ ಕಾಲ ವಾಕಿಂಗ್ ಮಾಡಿದರು. ಸೂರ್ಯಾಸ್ತವನ್ನು ಕಣ್ತುಂಬಿಕೊಂಡರು. ಈ ವೇಳೆ ಬಿಜೆಪಿ ನಾಯಕ ರಾಜಶೇಖರನ್ ನಾಯರ್ ಅವರ ಪತ್ನಿ ಹಾಗೂ ನಟಿ ಅಂಬಿಕಾ ಸಹೋದರಿ ನಟಿ ರಾಧಾ ಎದುರಾದರು. ಅವರೊಂದಿಗೆ ಕೆಲ ಸಮಯ ಮಾತುಕತೆ ನಡೆಸಿದರು.