– ಕಾಲು ಕಳ್ಕೊಂಡು ನದಿಯಲ್ಲಿ ನರಳುತ್ತಿರೋ ಎಮ್ಮೆ
ಯಾದಗಿರಿ: ಇತ್ತೀಚೆಗೆ ಕೇರಳದಲ್ಲಿ ಆನೆಯೊಂದು ದುಷ್ಟರ ಕೃತ್ಯಕ್ಕೆ ನದಿಯಲ್ಲಿ ನರಳಿ ಪ್ರಾಣ ಬಿಟ್ಟಿದೆ. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಮಾನವೀಯ ಘಟನೆ ಯಾದಗಿರಿಯಲ್ಲಿ ನಡೆಯುತ್ತಿದೆ.
ಎಮ್ಮೆಯೊಂದು ಜಿಲ್ಲೆಯ ವಡಗೇರಾ ತಾಲೂಕಿನ ಕೊಡಲ ಗ್ರಾಮದ ಸಮೀಪದ ಕೃಷ್ಣಾ ನದಿ ತೀರದಲ್ಲಿ ಮೊಸಳೆ ಹೊಡೆತಕ್ಕೆ ಸಿಕ್ಕು ಕಾಲು ಕಳೆದುಕೊಂಡಿದೆ. ಆದರೆ ಎಮ್ಮೆ ಕಳೆದ ಎರಡು ದಿನಗಳಿಂದ ನರಳುತ್ತಿದೆ. ಈ ವಿಷಯ ಸ್ಥಳೀಯ ಪಶು ಚಿಕಿತ್ಸಾಲಯ ಕ್ಕೆ ಗೊತ್ತಿದ್ದರೂ ಪಶು ವೈದ್ಯರು ಮಾತ್ರ ಎಮ್ಮೆಗೆ ಚಿಕಿತ್ಸೆ ನೀಡಲು ಮುಂದಾಗಿಲ್ಲ. ಇದರಿಂದ ಅತೀವ ನೋವಿನಿಂದ ನರಳುತ್ತಿರುವ ಎಮ್ಮೆ ನೋವು ತಗ್ಗಿಸಿಕೊಳ್ಳಲು ನದಿಯ ನೀರಿನಲ್ಲಿ ಕಾಲ ಕಳೆಯುತ್ತಿದೆ.
ಕಳೆದ ಎರಡು ದಿನಗಳ ಹಿಂದೆ ನೀರು ಕುಡಿಯಲು ನದಿ ತೀರಕ್ಕೆ ಎಮ್ಮೆ ತೆರಳಿತ್ತು. ಈ ಸಮಯದಲ್ಲಿ ಮೊಸಳೆಯೊಂದು ಎಮ್ಮೆಯ ಮೇಲೆ ಏಕಾಏಕಿ ದಾಳಿ ಮಾಡಿದೆ. ದಾಳಿಯಲ್ಲಿ ಎಮ್ಮೆಯ ಕಾಲು ಕಟ್ ಆಗಿದ್ದು, ಮೊಸಳೆ ಬಾಯಿಂದ ತಪ್ಪಿಸಿಕೊಂಡು ಎಮ್ಮೆ ಜೀವ ಉಳಿಸಿಕೊಂಡಿದೆ. ತೀವ್ರವಾಗಿ ಗಾಯಗೊಂಡಿರುವ ಎಮ್ಮೆಯ ರಕ್ಷಣೆಗೆ ಯಾರೂ ಧಾವಿಸದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ನದಿಯ ನೀರಿನಲ್ಲಿ ಎಮ್ಮೆ ಕುಳಿತಿದೆ.
ಇನ್ನೂ ನದಿಯಲ್ಲಿ ಮೊಸಳೆ ಇರುವುದರಿಂದ ನದಿಗಿಳಿದು ಎಮ್ಮೆ ಕಾಪಾಡಲು ಸ್ಥಳೀಯರು ಹಿಂದೇಟು ಹಾಕುತ್ತಿದ್ದಾರೆ. ಎರಡು ದಿನವಾದರೂ ಎಮ್ಮೆ ಮಾಲಿಕ ಪತ್ತೆಯಾಗಿಲ್ಲ. ವಿಷಯ ತಿಳಿದಿದ್ದರೂ ಇನ್ನೂ ಸ್ಥಳಕ್ಕೆ ಧಾವಿಸಿದ ಪಶು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.