– ಹಾಸನ ನರ್ಸಿಂಗ್ ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿಗಳು
ಹಾಸನ: ರಾಜ್ಯಾದ್ಯಂತ ಹಲವು ತಿಂಗಳು ಬಳಿಕ ಶಾಲಾ-ಕಾಲೇಜು ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ಈ ವೇಳೆ ಜಿಲ್ಲೆಗೆ ಕೇರಳದಿಂದ ಪರೀಕ್ಷೆ ಗೆ ಹಾಜರಾಗಲು ಬಂದಿದ್ದ ಒಂದೇ ಕಾಲೇಜಿನ 21 ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
15 ದಿನದ ಹಿಂದೆ ಹಾಸನ ನಗರದ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿರುವ ಕೇರಳ ಮೂಲದ 21 ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ ವರದಿಯಾಗಿರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಖಚಿತಪಡಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಕೆಆರ್ ಪುರಂನಲ್ಲಿ ಇರುವಂತಹ ಖಾಸಗಿ ಪಿಜಿಯಲ್ಲಿ ಇದ್ದುಕೊಂಡು ನರ್ಸಿಂಗ್ ಶಿಕ್ಷಣ ಪಡೆಯುತ್ತಿದ್ದಾರೆ. ಎಲ್ಲಾ ವಿದ್ಯಾರ್ಥಿಗಳೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 27 ವಿದ್ಯಾರ್ಥಿನಿಯರನ್ನು ಈಗಾಗಲೇ ಖಾಸಗಿ ವಸತಿಗೃಹದಲ್ಲಿ ಕ್ವಾರಂಟೈನಲ್ಲಿ ಇಡಲಾಗಿದ್ದು ಇವರನ್ನು ಕೂಡ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
ಬಂದಿದ್ದ 21 ಕೇರಳ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿ ಇರುವಂತಹ ಸಿಬ್ಬಂದಿ, ವಿದ್ಯಾರ್ಥಿಗಳಿಗೂ ಕೊರೊನಾ ಪರೀಕ್ಷೆ ಮಾಡಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮವನ್ನು ವಹಿಸಲಾಗುತ್ತಿದೆ ಎಂದು ಸತೀಶ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೊರೊನಾ 3ನೇ ಅಲೆ ಮಕ್ಕಳಿಗೆ ಹೆಚ್ಚು ಪರಿಣಾಮಕಾರಿಯಲ್ಲ-ಅಧ್ಯಯನ ವರದಿ!
ಹಾಸನ ನಗರದಲ್ಲಿ ದಿನನಿತ್ಯ ಕೊರೊನಾ ಪಾಸಿಟಿವ್ ಪ್ರಕರಣದ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಕೇರಳ ಮೂಲದ 21 ಕಾಲೇಜು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ರಾಜ್ಯದಲ್ಲಿ ಈಗಾಗಲೇ ಮೂರನೇ ಅಲೆ ಭೀತಿ ಎದುರಾಗಿದ್ದು ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹರಡುತ್ತಿರುವುದು ಹೆಚ್ಚು ಅಪಾಯಕಾರಿ ಬೆಳವಣಿಗೆಯಾಗಿದೆ.