ಮಡಿಕೇರಿ: ಕೊಡಗಿನ ರೆಸಾರ್ಟ್ ಅಥವಾ ಹೋಂಸ್ಟೇಗಳಲ್ಲಿ ತಂಗಲು ಬರುವ ಪ್ರವಾಸಿಗರು ಕೋವಿಡ್ ನೆಗೆಟಿವ್ ವರದಿ ತರುವುದನ್ನು ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ.
ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಸಾಕಷ್ಟು ನಿಯಮಗಳನ್ನು ಸಡಿಲಗೊಳಿಸಿದ್ದ ಕೊಡಗು ಜಿಲ್ಲಾಡಳಿತ, ಇದೀಗ ಕೇರಳ, ಮಹಾರಾಷ್ಟ್ರಗಳಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮತ್ತೆ ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಕೋವಿಡ್ ಹರಡುವ ಭೀತಿಯಿಂದ ಬಂದ್ ಮಾಡಿದ್ದ ಹೊಟೇಲ್, ರೆಸಾರ್ಟ್ ಮತ್ತು ಹೋಂಸ್ಟೇಗಳನ್ನು ಇತ್ತೀಚೆಗಷ್ಟೇ ತೆರೆಯಲಾಗಿದೆ. ಆದರೆ ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮತ್ತೆ ರೆಸಾರ್ಟ್ ಹಾಗೂ ಹೋಂ ಸ್ಟೇಗಳಲ್ಲಿ ನಿಯಮಗಳನ್ನು ಬಿಗಿಗೊಳಿಸಲಾಗಿದೆ.
ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಜಿಲ್ಲೆಗೆ ಬರುವ ಪ್ರವಾಸಿಗರು ಹೋಂಸ್ಟೇ ರೆಸಾರ್ಟ್‍ಗಳಲ್ಲಿ ತಂಗಬೇಕಾದರೆ 72 ಗಂಟೆಯೊಳಗೆ ಪಡೆದ ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹಾಜರು ಪಡಿಸಬೇಕು. ನೆಗೆಟಿವ್ ವರದಿ ಇಲ್ಲದೆಯೇ ಯಾವುದೇ ಕಾರಣಕ್ಕೂ ತಂಗಲು ಅವಕಾಶ ನೀಡದಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಕಟ್ಟುನಿಟ್ಟಾಗಿ ರೆಸಾರ್ಟ್ ಹಾಗೂ ಹೋಂ ಸ್ಟೇಗಳಿಗೆ ಸೂಚಿಸಿವೆ. ಇದರಿಂದ ಮತ್ತೆ ಎಚ್ಚೆತ್ತುಕೊಂಡಿರುವ ಕೊಡಗಿನ ಕೆಲವು ಹೋಂಸ್ಟೇ, ರೆಸಾರ್ಟ್ ಮತ್ತು ಹೊಟೇಲ್ ಗಳಲ್ಲಿ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿವೆ.
ರೆಸಾರ್ಟ್, ಹೊಟೇಲ್ ಗಳಿಗೆ ಬರುತ್ತಿದ್ದಂತೆ, ಗ್ರಾಹಕರಿಗೆ ಮೊದಲು ನೆಗೆಟಿವ್ ರಿಪೋರ್ಟ್ ಕೇಳುತ್ತಿವೆ. ರಿಪೋರ್ಟ್ ಇದ್ದರೆ, ಪುನಃ ಅವರಿಗೆ ಸ್ಥಳದಲ್ಲಿಯೇ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಬಾಡಿ ಟೆಂಪರೇಚರ್ ಕೂಡ ಚೆಕ್ ಮಾಡುತ್ತಿವೆ. ಈ ಎಲ್ಲ ಪರೀಕ್ಷೆಗಳ ಬಳಿಕವಷ್ಟೇ ರೆಸಾರ್ಟ್, ಹೋಂಸ್ಟೇ ಮತ್ತು ಹೊಟೇಲ್ ಗಳಲ್ಲಿ ತಂಗಲು ಎಂಟ್ರಿ ನೀಡುತ್ತಿವೆ. ಆದರೆ ಕಳೆದ 11 ತಿಂಗಳಿಂದ ಸಂಪೂರ್ಣ ಬಂದ್ ಆಗಿದ್ದ ರೆಸಾರ್ಟ್, ಹೋಂಸ್ಟೇಗಳು ಈಗಾಗಿರುವ ನಷ್ಟ ತುಂಬಿಕೊಳ್ಳಲು ಎಲ್ಲಿಂದ, ಯಾವ ಗ್ರಾಹಕರು ಬಂದರೂ ಉಳಿದುಕೊಳ್ಳಲು ಅವಕಾಶ ಕಲ್ಪಿಸುತ್ತಿವೆ ಎನ್ನೋದು ಕೂಡ ಗೊತ್ತಾಗಿದೆ.
ಇದೆಲ್ಲವನ್ನು ಅರಿತ ಆರೋಗ್ಯ ಇಲಾಖೆ, ಸಪ್ರೈಸ್ ವಿಸಿಟ್ ಮಾಡಿ ಎಲ್ಲವನ್ನೂ ಪರೀಲಿಸಿದರೆ ಮಾತ್ರ ಜಿಲ್ಲಾಡಳಿತ ಜಾರಿ ಮಾಡಿರುವ ನಿಯಮವನ್ನು ಹೋಂಸ್ಟೇ, ರೆಸಾರ್ಟ್‍ಗಳು ಎಷ್ಟರ ಮಟ್ಟಿಗೆ ಪಾಲಿಸುತ್ತಿವೆ ಎನ್ನುವುದು ಗೊತ್ತಾಗುತ್ತದೆ.