ಮಡಿಕೇರಿ: ಪಕ್ಕದ ಕೇರಳ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಕೇರಳ-ಕೊಡಗು ಗಡಿಭಾಗದಲ್ಲಿ ಅರೋಗ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಕೇರಳದಿಂದ ಬರುವವರಿಗೆ ತಪಾಸಣೆ ಮಾಡಲು ಮುಂದಾಗಿದೆ.
ಕೇರಳದಿಂದ ಹಾಗೂ ಕರ್ನಾಟಕದಿಂದ ಕೇರಳಕ್ಕೆ ಹೋಗಿ ಬರುವವರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ಗಡಿ ಭಾಗದಲ್ಲೇ ಇದಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ನೆಗೆಟಿವ್ ವರದಿ, ಇಲ್ಲವೇ ಕನಿಷ್ಠ ಒಂದು ಡೋಸ್ ಪಡೆದಿರುವ ವ್ಯಾಕ್ಸಿನ್ ಸರ್ಟಿಫಿಕೇಟ್ ಕಡ್ಡಾಯವಾಗಿದೆ. ಇಲ್ಲದಿದ್ದರೆ ಕರ್ನಾಟಕಕ್ಕೆ ಪ್ರವೇಶ ನಿರ್ಬಂಧಿಸಲಾಗುತ್ತಿದೆ. ಗಡಿಯಲ್ಲೇ ಹಲವರನ್ನು ವಾಪಸ್ ಕಳುಹಿಸುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮಾಕುಟ್ಟ ಚಕ್ ಪೋಸ್ಟ್ ನಲ್ಲಿ ಈ ದೃಶ್ಯ ಕಂಡು ಬರುತ್ತಿದೆ. ಕೇರಳದಿಂದ ಯಾರೇ ಬಂದರೂ ಕೋವಿಡ್ ನೆಗೆಟಿವ್ ವರದಿ, ಇಲ್ಲವೆ ವ್ಯಾಕ್ಸಿನ್ ಸರ್ಟಿಫಿಕೇಟ್ ಕಡ್ಡಾಯವಾಗಿದೆ.
ಮಾಕುಟ್ಟ ಚೆಕ್ ಪೋಸ್ಟ್ ನಲ್ಲಿ ಸರಿಯಾಗಿ ತಪಾಸಣೆ ಆಗುತ್ತಿರುವ ಕುರಿತು ಪರಿಶೀಲನೆ ನಡೆಸಲು ಡಿಎಚ್‍ಓ ಡಾ.ಮೋಹನ್ ಪರಿಶೀಲನೆ ನಡೆಸಿದರು. ಬಳಿಕ ಮಾತಾನಾಡಿದ ಅವರು, ಕೊಡಗಿನ ಮಾಕುಟ್ಟ, ಕುಟ್ಟ, ಕರಿಕೆ ಮೂರು ಚೆಕ್ ಪೋಸ್ಟ್ ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹೆಚ್ಚಾಗಿ ವಿರಾಜಪೇಟೆ ತಾಲೂಕಿನ ಮಾಕುಟ್ಟ ಚೆಕ್ ಪೋಸ್ಟ್ ಗೂಡ್ಸ್ ಚಾಲಕರಿಗೆ 15 ದಿನಕ್ಕೊಮ್ಮೆ ಕೋವಿಡ್ ಟೆಸ್ಟ್ ಕಡ್ಡಾಯ, ಕೇರಳಕ್ಕೆ ನಿತ್ಯ ಓಡಾಡುವ ಗೂಡ್ಸ್ ಚಾಲಕರು ಸ್ಥಳದಲ್ಲಿಯೇ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಅನುಕೂಲ ಕಲ್ಪಿಸಲಾಗಿದೆ.