ಹುಬ್ಬಳ್ಳಿ: ಕೇಂದ್ರ ಸರ್ಕಾರ ಯುದ್ದೋಪಾದಿಯಲ್ಲಿ ಕೋವಿಡ್ ನಿರ್ವಹಣೆ ಮಾಡುತ್ತಿದೆ. 105 ರೈಲುಗಳ ಮೂಲಕ ವಿವಿಧ ರಾಜ್ಯಗಳಿಗೆ ಆಕ್ಸಿಜನ್ ಸರಬರಾಜು ಮಾಡಲಾಗುತ್ತಿದೆ. ಕಾರ್ಗೋ ವಿಮಾನಗಳ ಮೂಲಕ 230 ಆಕ್ಸಿಜನ್ ಟ್ಯಾಂಕರ್‍ಗಳನ್ನು ಹಾಗೂ ಭಾರತದ ವಾಯು ಸೇನೆಯ 62 ಟ್ಯಾಂಕರ್ ಮೂಲಕ 1,142 ಮೆಟ್ರಿಕ್ ಟನ್ ಆಕ್ಸಿಜನ್ ದೇಶಾದ್ಯಂತ ಸರಬರಾಜು ಮಾಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದ ಸಕ್ರ್ಯೂಟ್ ಹೌಸ್ ಆವರಣದಲ್ಲಿ ಕೇಂದ್ರ ಸರ್ಕಾರದ ಎಂ.ಇ.ಸಿ.ಎಲ್ ಕಂಪನಿಯ ಸಿ.ಎಸ್.ಆರ್ ನಿಧಿಯಡಿ ನೀಡಲಾದ 80 ಆಕ್ಸಿಜನ್ ಕಾನ್ಸಟ್ರೇಟರ್ಸ್‍ಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಈ ಮೊದಲು ಉತ್ಪಾದನೆಯಾಗುವ ಆಮ್ಲಜನಕದಲ್ಲಿ ಶೇ.1 ರಷ್ಟು ಮಾತ್ರ ವೈದ್ಯಕೀಯ ಬಳಕೆಗೆ ಬಳಸಲಾಗುತ್ತಿತ್ತು. ಸದ್ಯ ಈ ಪ್ರಮಾಣ ಶೇ.6 ರಿಂದ 7ಕ್ಕೆ ಏರಿಕೆಯಾಗಿದೆ. ಪಿ.ಎಂ. ಕೇರ್ ಮೂಲಕ 322 ಕೋಟಿ ವೆಚ್ಚದಲ್ಲಿ 1.50 ಆಕ್ಸಿಕೇರ್ ಸಿಸ್ಟಮ್ ಖರೀದಿಸಲಾಗಿದೆ. ಜಗತ್ತಿನ 40 ರಾಷ್ಟಗಳು ದೇಶಕ್ಕೆ ಸಹಾಯ ಮಾಡುತ್ತಿವೆ. 2285 ಮೆಟ್ರಿಕ್ ಟನ್ ಆಕ್ಸಿಜನ್ ಬಹರೇನ್, ಕುವೈತ್ ಹಾಗೂ ಫ್ರಾನ್ಸ್‌ನಿಂದ ಆಮದು ಮಾಡಿಕೊಳ್ಳಲಾಗಿದೆ.
Advertisement
ಕೋವಿಡ್ 2ನೇ ಅಲೆಯ ಪ್ರಾರಂಭದಲ್ಲಿ ದೇಶದಲ್ಲಿ ಪ್ರತಿ ದಿನ 5700 ಟನ್ ಆಕ್ಸಿಜನ್ ಬೇಡಿಕೆ ಇತ್ತು. ಇಂದು 18,000 ಟನ್ ವರೆಗೆ ಬೇಡಿಕೆ ಹೆಚ್ಚಿದೆ. ದೇಶದಲ್ಲಿ ಪ್ರತಿದಿನ 11000 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆ ಮಾಡಲಾಗುತ್ತದೆ. ಪಿ.ಎಂ. ಕೇರ್ ಮೂಲಕ ಒಟ್ಟು 1594 ಪಿ.ಎಸ್.ಎ ಆಕ್ಸಿಜನ್ ಉತ್ಪಾದಕ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಕೇಂದ್ರ ಸರ್ಕಾರ ವಿವಿಧ ಉದ್ದಿಮೆಗಳಿಂದ ರಾಜ್ಯದ 28 ಜಿಲ್ಲೆಗಳಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ನಿರ್ಮಿಸಲು ಹಣ ನೀಡಲಾಗಿದೆ. ಜನಪ್ರತಿನಿಧಿಗಳ ಬೇಡಿಕೆಯಂತೆ ಇನ್ನೂ ಹೆಚ್ಚಿನ ಘಟಕಗಳನ್ನು ರಾಜ್ಯಕ್ಕೆ ಮಂಜೂರು ಮಾಡಲಾಗುವುದು. ಜಿಲ್ಲೆಗಳಿಗೆ ನೀಡಲಾಗುವ ಮಿನರಲ್ ಫಂಡ್ ನಲ್ಲಿ ಶೇ.30 ರಷ್ಟನ್ನು ಕೋವಿಡ್ ನಿರ್ವಹಣೆಗೆ ಬಳಸಲು ಅನುಮತಿ ನೀಡಲಾಗಿದೆ. ದೇಶದಲ್ಲಿ ಆಕ್ಸಿಜನ್‍ಗಿಂತ ಅವುಗಳನ್ನು ಸಾಗಿಸುವ ಟ್ಯಾಂಕರ್‍ಗಳ ಕೊರತೆ ಇದೆ. ಇದನ್ನು ಸರಿದೂಗಿಸಲು ಪ್ರೆಟ್ರೋಲಿಯಂ ಹಾಗೂ ನೈಟ್ರೋಜನ್ ಸಾಗಾಣಿಕೆಯ ಟ್ಯಾಂಕರ್‍ಗಳನ್ನು ಆಕ್ಸಿಜನ್ ಸಾಗಣಿಕೆಗೆ ಮಾರ್ಪಡಿಸಲಾಗುತ್ತಿದೆ. ಸದ್ಯ 1,580 ಟ್ಯಾಂಕರ್‍ಗಳು ಲಭ್ಯವಿವೆ. 2,000ಕ್ಕೂ ಹೆಚ್ಚು ಟ್ಯಾಂಕರ್‍ಗಳ ಅವಶ್ಯಕತೆ ಇದೆ. ರೆಮಿಡಿಸಿವರ್ ಉತ್ಪಾದನೆಯನ್ನು 38 ಲಕ್ಷದಿಂದ 1 ಕೋಟಿಗೆ ಹೆಚ್ಚಿಸಲಾಗಿದೆ. ದೇಶಾದ್ಯಂತ 18 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಕರ್ನಾಟಕ ರಾಜ್ಯಕ್ಕೆ 1.9 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದರು.
Advertisement
Advertisement
11.66 ಕೋಟಿ ರೈತರ ಖಾತೆಗೆ 19 ಸಾವಿರ ಕೋಟಿ ರೂಪಾಯಿಗೆ ಜಮೆ:
ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ 11.66 ಕೋಟಿ ರೈತರಿಗೆ 8ನೇ ಹಂತದ 19 ಸಾವಿರ ಕೋಟಿ ಹಣವನ್ನು ಬಿಡುಗಡೆ ಮಾಡಿಲಾಗಿದೆ. ಈ ಹಣ ರೈತರ ಖಾತೆಗೆ ನೇರವಾಗಿ ಜಮೆಯಾಗಿದೆ. ಧಾರವಾಡ ಜಿಲ್ಲೆಯಲ್ಲಿ 1.58 ಲಕ್ಷ ರೈತ ಕುಟುಂಬಗಳಿಗೆ ಹಣ ಜಮೆಯಾಗಿದೆ. 2019 ಮಾರ್ಚ್ 21ರಿಂದ ಇಲ್ಲಿಯ ವರೆಗೆ ಧಾರವಾಡ ಜಿಲ್ಲೆಗೆ 238 ಕೋಟಿ ರೂಪಯಿಗಳು ಕೃಷಿ ಸಮ್ಮಾನ್ ಯೋಜನೆಯಡಿ ಬಿಡುಗಡೆ ಮಾಡಲಾಗಿದೆ. ಈ ಬಾರಿ 29.36 ಕೋಟಿ ಜಮೆಯಾಗಿದೆ. ಕರ್ನಾಟಕ ರಾಜ್ಯದ 55 ಲಕ್ಷ ರೈತರ ಖಾತೆಗೆ ಇಲ್ಲಿಯವರೆಗೆ 985 ಕೋಟಿ ಹಣ ನೀಡಲಾಗಿದೆ. ಇದರೊಂದಿಗೆ ರೈತರು ಮಾರ್ಚ್ 31ರವರೆಗೆ ಬೆಳೆ ಸಾಲದ ಮೇಲೆ ಬಡ್ಡಿ ತುಂಬಿದರೆ ನೀಡಲಾಗುವ ಬಡ್ಡಿ ಮೇಲಿನ ಸಬ್ಸಿಡಿ ಅವಧಿಯನ್ನು ಜೂನ್ 31ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
Advertisement
ಧಾರವಾಡ ಜಿಲ್ಲೆಯ ಕೋವಿಡ್ ನಿಯಂತ್ರಕ್ಕೆ ಹಲವು ಉಪಕ್ರಮ:
ಧಾರವಾಡ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಾಗದಂತೆ ಕೆಲಸ ನಿರ್ವಹಿಸಲಾಗುತ್ತಿದೆ. ಹುಬ್ಬಳ್ಳಿ ಕಿಮ್ಸ್‍ನಲ್ಲಿ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ನಿರ್ಮಿಸಿಲಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಧಾರವಾಡ ಜಿಲ್ಲೆಗೆ ಸಂಜೀವಿನಿಯಾಗಿದೆ. ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಮದರ್ ಆ್ಯಂಡ್ ಚೈಲ್ಡ್ ಆಸ್ಪತ್ರೆಯಲ್ಲಿ ಸಹ ಕೂಡ ಕೋವಿಡ್ ಆಸ್ಪತ್ರೆಗಳನ್ನಾಗಿ ಮಾರ್ಪಡಿಸಲಾಗಿದೆ. ವೇದಾಂತ ಕಂಪನಿಯಿಂದ ಕಿಮ್ಸ್‍ನಲ್ಲಿ 100 ಬೆಡ್‍ಗಳ ಆಸ್ಪತ್ರೆ ನಿರ್ಮಾಣಕ್ಕೆ ಎಂ.ಓ.ಯು ಸಹಿ ಮಾಡಲಾಗಿದೆ.
53 ಸಾವಿರ ವೆಚ್ಚದ 5 ಲೀಟರ್ ಸಾಮಥ್ರ್ಯದ 80 ಆಕ್ಸಿಜನ್ ಕಾನ್ಸಟ್ರೇಟರ್ಸ್ ಜಿಲ್ಲಾಡಳಿತಕ್ಕೆ ಹಸ್ತಾಂತರಲಾಗಿದೆ. ಇವುಗಳ ಅಗತ್ಯ ಇರುವೆಡೆ ಬಳಸಲಾಗುವುದು. 4 ಪಿ.ಎಸ್.ಎ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಜಿಲ್ಲೆಗೆ ನೀಡಲಾಗಿದೆ. ಇದರಿಂದ ಜಿಲ್ಲೆಯ ಆಮ್ಲಜನಕದ ಕೊರತೆ ನೀಗಲಿದೆ. ಸಾರ್ವಜನಿಕರು ಕೋವಿಡ್ ಬಗ್ಗೆ ಭಯ ಹಾಗೂ ಗಾಬರಿ ಪಡುವ ಅಗತ್ಯವಿಲ್ಲ. ಆದರೆ ನಿರ್ಲಕ್ಷ್ಯ ಮಾಡಬಾರದು. ಪೆಟ್ರೋಲಿಯಂ ಖಾತೆ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ಎಲ್ಲಾ ರಾಜ್ಯಕ್ಕೆ ಸರ್ಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಆಕ್ಸಿಜನ್ ಕೊರತೆ ಬರದೆ ಹಾಗೆ ಸರ್ವ ಪ್ರಯತ್ನ ಮಾಡಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಆಗಸ್ಟ್ ನಿಂದ ಡಿಸೆಂಬರ್ ಒಳಗೆ 200 ಕೋಟಿ ಕೋವಿಡ್ ಲಸಿಕೆ ವಿತರಣೆ:
ಕೋವಿಡ್ 2ನೇ ಅಲೆಯ ಬಗ್ಗೆ ತಾಂತ್ರಿಕ ಸಮಿತಿ ಮುನ್ಸೂಚನೆ ನೀಡಿತ್ತು. ಆದರೆ ಈ ಪ್ರಮಾಣದಲ್ಲಿ ಆಕ್ಸಿಜನ್, ಅಗತ್ಯ ವೈದ್ಯಕೀಯ ಔಷಧಿಗಳ ಬೇಡಿಕೆ ಬರಲಿದೆ ಎಂಬುದನ್ನು ಹೇಳಿರಲಿಲ್ಲ. ಕೋವಿಡ್ 2ನೇ ಅಲೆಯ ತೀವ್ರತೆ ಅನೀರಿಕ್ಷತವಾದದ್ದು. ಮೊದಲಿಗೆ ಕೋವಿಡ್ ಲಸಿಕೆ ಬಗ್ಗೆ ಹಲವಾರು ಟೀಕೆ ಟಿಪ್ಪಣಿ ಮಾಡಿದ್ದರು. ಇಂದು ಲಸಿಕೆ ಬೇಡಿಕೆ ಹೆಚ್ಚಿದೆ. ಉತ್ಪಾದನೆಯನ್ನು ಸಹ ಹೆಚ್ಚಿಸಲಾಗಿದೆ. ಆಗಸ್ಟ್‍ನಿಂದ ಡಿಸೆಂಬರ್ ಒಳಗೆ 200 ಕೋಟಿ ಲಸಿಕೆ ವಿತರಣೆ ಮಾಡಲಾಗುವುದು. ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಕೂಡ ಸಾಕಷ್ಟು ಪ್ರಮಾಣದ ಲಸಿಕೆ ಲಭಿಸಲಿದೆ. ಕೋವಿಡ್ ವಿಚಾರದಲ್ಲಿ ರಾಜಕಾರಣ ಸಲ್ಲದು. ವಿರೋಧ ಪಕ್ಷಗಳು ಟೀಕಿಸುವ ಬದಲು ಸಹಕಾರ ನೀಡಲಿ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಉತ್ತರಿಸಿದರು.
ಈ ಸಂದರ್ಭದಲ್ಲಿ ಬೃಹತ್ ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ತಹಶೀಲ್ದಾರ್ ಶಶಿಧರ ಮಾಡ್ಯಾಳ ಮತ್ತಿತರರು ಉಪಸ್ಥಿತರಿದ್ದರು.