ಬೆಂಗಳೂರು: ಕೇಂದ್ರ ಬಜೆಟ್ ದಿನವೇ ಸರ್ಕಾರಕ್ಕೆ ಪ್ರತಿಭಟನೆ ಬಿಸಿ ತಗುಲಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಟೋ, ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸಲಿದ್ದಾರೆ. ಸುಮಾರು 10 ಸಾವಿರ ಚಾಲಕರು ರಸ್ತಗಿಳಿಯಲಿದ್ದು, ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ.
ಕರ್ನಾಟಕ ಚಾಲಕರ ಒಕ್ಕೂಟದಿಂದ ಸತ್ಯಾಗ್ರಹಕ್ಕೆ ಕರೆ ನೀಡಿದ್ದು, ಪ್ರತಿಭಟನೆಗೆ ಏರ್ ಪೋರ್ಟ್ ಟ್ಯಾಕ್ಸಿ, ಒಲಾ-ಊಬರ್, ಟ್ರಾವೆಲ್ಸ್ ಅಸೋಸಿಯೇಷನ್ ಬೆಂಬಲ ನೀಡಿವೆ. ಇಂದು ಬೆಳಗ್ಗೆ 10 ಗಂಟೆಗೆ ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಅರೆಬೆತ್ತಲೆ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಲಿದ್ದಾರೆ.
ಪ್ರತಿಭಟನಾ ನಿರತರ ಬೇಡಿಕೆಗಳೇನು?:
1. ನಿರ್ದಿಷ್ಟವಾಗಿ ಒಂದೇ ದರ ನಿಗದಿಪಡಿಸುವುದು. ಆನ್‍ಲೈನ್ ಆ್ಯಪ್‍ಗಳಿಗೆ ದರ ನಿಗದಿ ಪಡಿಸಿ ಮೂಗುದಾರ ಹಾಕುವುದು.
2. ಸರ್ಕಾರ ನಿಗದಿಪಡಿಸಿದ ದರವನ್ನು ಬಿಟ್ಟು ಹೆಚ್ಚು ಅಥವಾ ಕಡಿಮೆ ದರ ಯಾವುದೇ ಆನ್‍ಲೈನ್ ಆ್ಯಪ್ ನೀಡಬಾರದು.
3. ಪ್ರೈವೇಟ್ ಫೈನಾನ್ಸ್ ಕಂಪನಿಗಳ ಕಾನೂನು ಸಂಪೂರ್ಣವಾಗಿ ಚಾಲಕರಿಗೆ ವಿರೋಧವಾಗಿದೆ. ಗ್ರಾಹಕರು ಕಂಪನಿಗಳು ಮಾಡುವ ಮೋಸವನ್ನು ತಡೆಯಲಾಗದೆ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಪ್ರೈವೇಟ್ ಫೈನಾನ್ಸ್ ಕಂಪನಿಗಳ ಕಾನೂನು ಸಂಪೂರ್ಣವಾಗಿ ಮರು ತಿದ್ದುಪಡಿಗೊಳಿಸಬೇಕು.
4. ಸರ್ಕಾರ ಚಾಲಕರಿಗೆ ನೀಡಿದ ವಿಮೆ ಅಪಘಾತಕ್ಕೆ ಮಾತ್ರ ಸೀಮಿತವಾಗಿದೆ. ಇದನ್ನು ಹೃದಯಾಘಾತ ಮತ್ತು ಆಕಸ್ಮಿಕ ಮರಣ ಹೊಂದಿದ್ದಲ್ಲಿ ಕೊಡಬೇಕು.
5. ಚಾಲಕರ ನಿಗಮ ಮಂಡಳಿ ತುರ್ತಾಗಿ ಸ್ಥಾಪಿಸುವುದು.
6. ಚಾಲಕರ ದಿನಾಚರಣೆ ಸರ್ಕಾರದ ವತಿಯಿಂದ ನಿಗದಿ ಪಡಿಸುವುದು.