ನವದೆಹಲಿ: ಪ್ರತಿ ತಿಂಗಳು 85 ಲಕ್ಷ ಕೋವಿಡ್ ಲಸಿಕೆ ಡೋಸೇಜ್ ಗಳನ್ನು ಕೇಂದ್ರ ಪೂರೈಕೆ ಮಾಡಿದರೆ 3 ತಿಂಗಳಲ್ಲಿ ದೆಹಲಿಯ ಎಲ್ಲಾ ಜನರಿಗೂ ಲಸಿಕೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ದಿನ ಸರಿಸುಮಾರು 1 ಲಕ್ಷ ಡೋಸ್ ಲಸಿಕೆಗಳನ್ನು ನೀಡಲಾಗುತ್ತಿದೆ. ಈ ಪ್ರಮಾಣವನ್ನು 3 ಲಕ್ಷಕ್ಕೆ ಏರಿಕೆ ಮಾಡುವ ಕೆಲಸವಾಗಬೇಕಿದೆ ಎಂದು ಅವರು ತಿಳಿಸಿದರು.
ಅಲ್ಲದೆ ಇಲ್ಲಿ ಲಸಿಕೆ ನೀಡುವ ವ್ಯವಸ್ಥೆ ಕೂಡ ಉತ್ತಮವಾಗಿರುವುದರಿಂದ ಈಗಾಗಲೇ ಪಕ್ಕದ ಫರಿದಾಬಾದ್, ಸೀನಿಪತ್, ಗುರುಗ್ರಾಮ, ನೋಯ್ಡಾ ಹಾಗೂ ಗಾಜಿಯಾಬಾದ್ ನಿಂದ ಬಹಳಷ್ಟು ಮಂದಿ ಬಂದಿ ಲಸಿಕೆ ಪಡೆಯುತ್ತಿದ್ದಾರೆ. ಆದರೆ ನಮ್ಮಲ್ಲಿ ಸಾಕಷ್ಟು ಲಸಿಕೆಗಳು ಇಲ್ಲ. ಹೀಗಾಗಿ ಕೇಂದ್ರ ಸರ್ಕಾರ ಶೀಘ್ರವೇ ಸರಿಯಾದ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಮಾಡಬೇಕು. ಒಂದು ವೇಳೆ ಸರ್ಕಾರ ಲಸಿಕೆ ಪೂರೈಸಿದರೆ ಕೇವಲ ಮೂರು ತಿಂಗಳಲ್ಲಿಯೇ ನಾವು ದೆಹಲುಯ ಎಲ್ಲಾ ಜನರಿಗೂ ಲಸಿಕೆ ನೀಡುತ್ತೇವೆ ಎಂದು ಸಿಎಂ ಹೇಳಿದರು.
ದೆಹಲಿಯಲ್ಲಿ ಇದೂವರೆಗೆ ಸುಮಾರು 40 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಮೂರು ತಿಂಗಳಲ್ಲಿ ನಮಗೆ 2.5 ಕೋಟಿ ಲಸಿಕೆ ಬೇಕು. ಅಲ್ಲದೆ ಪ್ರತಿ ತಿಂಗಳು 80ರಿಂದ 85 ಲಕ್ಷ ಡೋಸ್ ಲಸಿಕೆಗಳು ಬೇಕಾಗುತ್ತವೆ ಎಂದು ಕೇಜ್ರಿವಾಲ್ ಅಂದಾಜಿಸಿದ್ದಾರೆ.