ಕಾರವಾರ: ಜಲ ಜೀವನ ಮಿಷನ್, ನರೇಗಾ, ವಸತಿ, ಆರೋಗ್ಯ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ನೇರವಾಗಿ ನೀಡುತ್ತಿರುವ ವಿಶೇಷ ಅನುದಾನದ ಬಳಕೆ ಬಗ್ಗೆ ಕೇಂದ್ರ ಸರ್ಕಾರ ಹದ್ದಿನ ಕಣ್ಣಿಟ್ಟಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅತ್ಯಂತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಂಸದ ಅನಂತ್ ಕುಮಾರ್ ಹೆಗ್ಡೆ ಹೇಳಿದರು.
ಜಿಲ್ಲಾ ಪಂಚಾಯತ್‍ನ ಸಭಾಭವನದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Advertisement
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಅಂತಹ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಕೋಟ್ಯಂತರ ರೂಪಾಯಿ ವಿಶೇಷ ಅನುದಾನ ನೀಡುತ್ತಿದೆ. ಆದರೆ ಜಲ ಜೀವನ ಮಿಷನ್‍ನಡಿ ಜಿಲ್ಲೆಯಾದ್ಯಂತ ಕೈಗೊಂಡಿರುವ ಕಾಮಗಾರಿಯ ಬಗ್ಗೆ ಶಾಸಕರು ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಗಳಿಗೂ ಮಾಹಿತಿಯೇ ಇಲ್ಲ. ಜನಪ್ರತಿನಿಧಿಗಳಿಗೆ ತಿಳಿಸದನೇ ಅಧಿಕಾರಿಗಳು ನೇರವಾಗಿ ತಮಗೆ ತಿಳಿದಂತೆ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದಿರಿ. ಅಧಿಕಾರಿಗಳ ಈ ನಡವಳಿಕೆಯಿಂದ ಮುಂಬರುವ ದಿನಗಳಲ್ಲಿ ಯೋಜನೆ ವಿಫಲವಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರದ ಯೋಜನೆ ಜನರಿಗೆ ತಲುಪದ ಬಗ್ಗೆ ಶಾಸಕಿ ರೂಪಾಲಿ ನಾಯ್ಕ್ ಮಾತನಾಡಿದರು.
Advertisement
Advertisement
ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಹೆಗ್ಡೆ, ಶಾಸಕರು ಹೆಳಿರುವುದು ಸತ್ಯವಾಗಿದೆ. ಮನೆ ಮನೆಗೆ ನೀರನ್ನು ಒದಗಿಸಬೇಕು. ಜನರ ದಾಹವನ್ನು ತಣಿಸಬೇಕು ಎಂಬು ಉದ್ದೇಶದಿಂದ ಕೇಂದ್ರ ಸರ್ಕಾರ ಜಲ ಜೀವನ ಮಿಷನ್ ಜಾರಿಗೆ ತಂದಿದೆ. ಇಂತಹ ಮಹತ್ವಾಕಾಂಕ್ಷೆ ಯೋಜನೆಯನ್ನು ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಅನುಷ್ಠಾನಕ್ಕೆ ತರಬೇಕು. ಆಗ ಯೋಜನೆಯ ಬಗ್ಗೆ ಜನರಿಗೆ ತಿಳಿಯುವುದರ ಜೊತೆಗೆ ಹೆಚ್ಚಿನ ಪ್ರಚಾರವೂ ಸಿಗುತ್ತದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿದ್ದು, ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳ ಗಮನಕ್ಕೆ ತರದೇ ನೇರವಾಗಿ ಅಧಿಕಾರ ಚಲಾಯಿಸಲು ಯಾವುದೇ ಅವಕಾಶವಿಲ್ಲ. ಅಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳಬಾರದು. ಇಂತಹ ಘಟನೆಗೆಳು ಮರುಕಳಿಸಿದರೆ ಸಂಬಂಧಪಟ್ಟ ಅಧಿಕಾರಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಪ್ರಳಯವಾದರೂ ಆ 14 ಮಂದಿಯನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದಿದ್ದು ನಿಜ: ಸಿದ್ದರಾಮಯ್ಯ
Advertisement
ಜನರ ಒಳಿತಿಗಾಗಿ ತಂದಿರುವ ಯೋಜನೆಯ ಬಗ್ಗೆ ಶಾಸಕರು ಸೇರಿದಂತೆ ಸಂಬಂಧಿಸಿದ ಎಲ್ಲ ಜನಪ್ರತಿನಿಧಿಗಳಿಗೆ ತಿಳಿಸಬೇಕು. ನಂತರ ಅವರ ಸಹಭಾಗಿತ್ವದಲ್ಲಿ ಕಾಮಗಾರಿ ಕೈಗೊಂಡು ಜನಪ್ರತಿನಿಧಿಗಳಿಂದ ಉದ್ಘಾಟನೆ ಮಾಡಿಸಬೇಕು. ಜನಪರ ಯೋಜನೆಗಳಿಗೆ ವಿಶೇಷ ಅನುದಾನ ನೀಡುತ್ತಿರುವ ಕೇಂದ್ರ ಸರ್ಕಾರ ಆ ಅನುದಾನದ ಬಳಕೆ ಹೇಗೆಲ್ಲ ಆಗುತ್ತಿದೆ ಎಂಬುವುದನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಇದು ಅಧಿಕಾರಿಗಳ ವರ್ಗದ ಗಮನಕ್ಕಿರಬೇಕು. ಒಂದುವೇಳೆ ಅನುದಾನ ಬಳಕೆಯಲ್ಲಿ ಅಕ್ರಮವೇನಾದರೂ ನಡೆದರೆ ಅದನ್ನು ಸೂಕ್ತ ರೀತಿಯಲ್ಲಿ ತನಿಖೆಗೆ ಒಳಪಡಿಸಿ ಸಂಬಂಧಿಸಿದ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮುಂದೆ ಅಂತವರಿಗೆ ನಿವೃತ್ತಿ ವೇತನವೂ ಸಿಗದಂತ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿ ಅಧಿಕಾರಿ ವರ್ಗದವರು ತುಂಬಾ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಿದೆ ಎಂದರು.
ಜಿಲ್ಲೆಯಲ್ಲಿ ಜೇನು ಕೃಷಿಗೆ ಉತ್ತಮ ಅವಕಾಶಗಳಿದ್ದು, ಜೇನು ಅತೀ ಹೆಚ್ಚು ಗೂಡು ಕಟ್ಟುವಂತ ಮರಗಳನ್ನು ಪಟ್ಟಿ ಮಾಡಿ ವರದಿ ನೀಡುವಂತೆ ತೋಟಗಾರಿಕೆ ಇಲಾಖೆಗೆ ಈ ಹಿಂದಿನ ಸಭೆಯಲ್ಲಿ ಸೂಚಿಸಲಾಗಿತ್ತು. ಅದರಂತೆ ಇಲಾಖೆ ಅಧಿಕಾರಿಗಳು ಜೇನು ಕೃಷಿಗೆ ಪೂರಕವಾಗುವಂತ ಸುಮಾರು 10 ತಳಿಯ ಮರಗಳ ಪಟ್ಟಿಯನ್ನು ಮಾಡಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಮರಗಳ ಸಸಿಗಳನ್ನು ಬೆಳಸಿ ಅರಣ್ಯ ಪ್ರದೇಶದಲ್ಲಿ ಅವಗಳನ್ನು ನೆಡುವಂತ ಕಾರ್ಯವಾಗಬೇಕು. ಇದರಿಂದ ಪರಿಸರ ವೃದ್ಧಿ ಜೊತೆಗೆ ಜೇನು ಕೃಷಿಕರಿಗೆ ಸಹಕಾರಿಯಾಗಲಿದೆ ಎಂದರು.
ಮುಂಬರುವ 2023-24ರ ಸಮಯಕ್ಕೆ ಜಿಲ್ಲೆಯಲ್ಲಿ ವಿಮಾನ, ಹಡಗು ನಿಲ್ದಾಣ ಸೇರಿದಂತೆ ವಿವಿಧ ಕೈಗಾರಿಕಾ ಉದ್ಯಮಗಳು ಕಾಲಿಡಲಿವೆ. ಹೀಗಾಗಿ ಜಿಲ್ಲೆಯಲ್ಲಿ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಸ್ಥಳೀಯ ಪ್ರತಿಭೆಗಳಿಗೆ ಮುಂದುವರಿದ ತಂತ್ರಜ್ಞಾನಕ್ಕೆ ಪೂರಕವಾದ ವಿವಿಧ ಕೌಶಲ್ಯಗಳ ಕುರಿತು ತರಬೇತಿ ನೀಡಬೇಕಿದೆ. ಇದರಿಂದ ಜಿಲ್ಲೆಯಲ್ಲಿ ನಿರುದ್ಯೋಗದ ಸಮಸ್ಯೆ ನಿವಾರಣೆ ಸಾಧ್ಯವಿದೆ ಎಂದು ತಿಳಿಸಿದರು.
ಕೃಷಿ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸ್ವಚ್ಛ ಭಾರತ್ ಅಭಿಯಾನ್, ನರೇಗಾ, ಕುಡಿಯುವ ನೀರು, ಅಕ್ಷರದಾಸೋಹ ಸೇರಿದಂತೆ ವಿವಿಧ 21ಕ್ಕೂ ಅಧಿಕ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಸಂಸದರು ಈ ಸಂದರ್ಭದಲ್ಲಿ ನಡೆಸಿದರು.
ಇದೇ ಸಂದರ್ಭದಲ್ಲಿ ಪ್ಲಾಸ್ಟಿಕ್ ಬ್ಯಾಗ್ ಬಳಕೆ ನಿಷೇಧ ದಿನಾಚರಣೆ ನಿಮಿತ್ತ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹೊರತಂದ ಸ್ವಚ್ಛ ಸಂಕೀರ್ಣ ಕೈಪಿಡಿ, ಕರ್ನಾಟಕ ಗ್ರಾಮೀಣ ಘನ ಮತ್ತು ದ್ರವ ತ್ಯಾಜ್ಯ ಉಪ ವಿಧಿಯ ಪರಿಹಾರ ಹೆಲ್ಪ್‍ಲೈನ್ ನಂಬರ್, ವಿಶ್ವ ಜನಸಂಖ್ಯಾ ದಿನಾಚರಣೆ ನಿಮಿತ್ತ ‘ಜನಸಂಖ್ಯಾ ಸ್ಥಿರತೆ ನಿಮಿಂದ ಮಾತ್ರ ಸಾಧ್ಯ’ ಎಂಬ ಕರಪತ್ರವನ್ನು ಸಂಸದರು ಬಿಡುಗಡೆ ಮಾಡಿದರು.
ಸಭೆಯಲ್ಲಿ ಶಾಸಕರಾದ ದಿನಕರ್ ಶೆಟ್ಟಿ, ಸುನಿಲ್ ನಾಯ್ಕ್, ರೂಪಾಲಿ ನಾಯ್ಕ್, ವಿದಾನ ಪರಿಷತ್ ಸದಸ್ಯ ಶಾಂತರಾಮ ಸಿದ್ಧಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ್‍ನ ಸಿಇಒ ಪ್ರಿಂಯಾಂಗಾ ಮುಂತಾದವರು ಉಪಸ್ಥಿತರಿದ್ದರು.