– ಮಾತುಕತೆಗೆ ನಾಲ್ವರು ಸದಸ್ಯರ ಸಮಿತಿ
– ಮುಂದಿನ ಆದೇಶದವರೆಗೂ ತಡೆಯಾಜ್ಞೆ
ನವದೆಹಲಿ: ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆ ಜಾರಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಸಮಸ್ಯೆ ಇತ್ಯರ್ಥಕ್ಕಾಗಿ ನಾಲ್ವರು ಸದಸ್ಯರ ಸಮಿತಿ ರಚನೆಗೆ ಸುಪ್ರೀಂಕೋರ್ಟ್ ಸೂಚಿಸಿದೆ. ಸುಪ್ರೀಂಕೋರ್ಟ್ ಸಮಿತಿಯಲ್ಲಿ ಧನವಂತ್ ಶೇಖಾವತ್, ಜೀತೇಂದ್ರ ಸಿಂಗ್ ಮಾನ್, ಅಶೋಕ್ ಗುಲಾಟಿ ಮತ್ತು ಡಾ.ಪ್ರಮೋದ್ ಕುಮಾರ್ ಇರಲಿದ್ದಾರೆ.
ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನ್ಯಾ. ಎಸ್.ಎ ಬೊಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ನಡೆಸಿತ್ತು. ರೈತ ಮುಖಂಡರ ಜೊತೆಗೆ ಕೇಂದ್ರ ಸರ್ಕಾರ ನಡೆಸುತ್ತಿರುವ ಸಂಧಾನ ಸಭೆ ನಿರಾಶದಾಯಕವಾಗಿದ್ದು ಪರಿಸ್ಥಿತಿ ವಿಕೋಪಕ್ಕೆ ತೆರಳಿ ರಕ್ತಪಾತಗಳಾದರೆ ಯಾರು ಹೊಣೆ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿತ್ತು.
#FarmLaws: Supreme Court forms a committee to hold talks https://t.co/eIXr3WcNvA
— ANI (@ANI) January 12, 2021
ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದೆ ಪ್ರತಿಭಟನಾಕಾರರನ್ನು ವಿಶ್ವಾಸಕ್ಕೆ ಪಡೆಯುವ ಕೇಂದ್ರ ಸರ್ಕಾರದ ನಡೆ ಸಮಾಧಾನ ತಂದಿಲ್ಲ. ಇಲ್ಲಿ ಪರಿಸ್ಥಿತಿ ಹದಗೆಟ್ಟಿರುವುದನ್ನು ಕೋರ್ಟ್ ಗಮನಿಸುತ್ತಿದೆ. ಗಣರಾಜ್ಯೋತ್ಸವ ದಿನದಂದು ದೊಡ್ಡ ರ್ಯಾಲಿ ನಡೆಯಲಿದ್ದು ಪರಿಸ್ಥಿತಿ ಕೈ ಮೀರಿ ಹೋದರೆ ಯಾರು ಹೊಣೆ ಎಂದು ಸುಪ್ರೀಂ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿ ತರಾಟೆ ತೆಗೆದುಕೊಂಡಿತ್ತು.