ಹುಬ್ಬಳ್ಳಿ: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬ್ಲಾಕ್ ಫಂಗಸ್ ಚಿಕಿತ್ಸೆಗಾಗಿ 9 ಸಾವಿರ ಅಂಪೋಟೆರಿಸಿನ್ ಬಿ ವೈಯಲ್ಸ್ ಹಂಚಿಕೆ ಮಾಡಲಾಗಿದೆ. ಅಗತ್ಯಾನುಸಾರ ಜಿಲ್ಲೆಗಳಿಗೆ ತ್ವರಿತವಾಗಿ ವಿತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಧಾರವಾಡ ಜಿಲ್ಲೆಗೆ ಸಂಬಂಧಿಸಿದ ಕೋವಿಡ್ ಪ್ರಗತಿ ಪರಿಶೀಲನೆ ಸಭೆ ನಡೆಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಉತ್ತಮವಾಗಿದೆ. ಕೋವಿಡ್ ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಕ್ಕಳಿಗಾಗಿ 600 ಆಕ್ಸಿಜನ್ ಬೆಡ್‍ಗಳನ್ನು ಮೀಸಲಿರಿಸಿದ್ದಾರೆ. ಕಿಮ್ಸ್‍ನ ತಾಯಿ, ಮಕ್ಕಳ ಆರೈಕೆ (ಎಂ.ಸಿ.ಹೆಚ್) ಆಸ್ಪತ್ರೆಯಲ್ಲಿ 400 ಬೆಡ್ ಕೋವಿಡ್ ಆಸ್ಪತ್ರೆಯನ್ನು ಮಕ್ಕಳಿಗಾಗಿ ನಿರ್ಮಿಸಲಾಗಿದೆ ಎಂದರು.
ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಮರಣ ದರ ಶೇ.1.70 ಇದೆ. ರಾಜ್ಯದ ಸರಾಸರಿಗೆ ಹೋಲಿಸಿದರೆ ಹೆಚ್ಚಿದೆ, ಜಿಲ್ಲೆಯ ಮರಣ ದರ ತಗ್ಗಿಸುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸುವಂತೆ ನಿರ್ದೇಶನ ನೀಡಿದರು. ಇದನ್ನೂ ಓದಿ: ಪಾಸಿಟಿವಿಟಿ ರೇಟ್ ಶೇ.10.66ಕ್ಕೆ ಇಳಿಕೆ- ಇಂದು 16,068 ಹೊಸ ಪ್ರಕರಣ, 364 ಸಾವು
ಸೋಂಕು ಪತ್ತೆಯಾದ ತಕ್ಷಣ ಸೋಂಕಿತರ ಬಗ್ಗೆ ನಿಗಾ ವಹಿಸಿ ಚಿಕಿತ್ಸೆ ನೀಡಬೇಕು. ಹಳ್ಳಿಗಳಲ್ಲಿನ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‍ಗಳಿಗೆ ದಾಖಲಿಸಿ. ಮನೆಯಲ್ಲಿ ಇರಲು ಬಿಡಬೇಡಿ. ಗ್ರಾಮೀಣ ಭಾಗದ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಉತ್ತಮ ಆಹಾರ, ವೈದ್ಯಕೀಯ ಚಿಕಿತ್ಸೆ, ಔಷಧೋಪಚಾರ ಮಾಡಬೇಕು. ಸ್ವಚ್ಛತೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬ್ಲ್ಯಾಕ್ ಫಂಗಸ್ ಸಾವು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಕೋವಿಡ್ ಲಸಿಕೆ ನೀಡುವುದನ್ನು ತ್ರೀವ್ರಗೊಳಿಸಬೇಕು. ಧಾರವಾಡ ಜಿಲ್ಲೆಯಲ್ಲಿ ಸದ್ಯ ಕೋವಿಡ್ ಸೋಂಕಿತರ ಖಚಿತ ಪ್ರಮಾಣ ಶೇ.11.9 ಇದೆ. ಇದನ್ನು ಶೇ.5ಕ್ಕೆ ಇಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು. ಕೋವಿಡ್ ಸೋಂಕಿನ ಖಚಿತ ಪ್ರಮಾಣ ಶೇ.5ಕ್ಕೆ ಇಳಿದರೆ ಲಾಕ್‍ಡೌನ್ ನಲ್ಲಿ ವಿನಾಯಿತಿ ನೀಡಲಾಗುವುದು. ಕೋವಿಡ್ ಸೋಂಕು ಹರಡದಂತೆ ತಡೆಯುವುದು ಜನರ ಕೈಯಲ್ಲೇ ಇದೆ. ಇನ್ನೆರಡು ದಿನದಲ್ಲಿ ರಾಜ್ಯಕ್ಕೆ ಅಗತ್ಯ ಕೋವಿಡ್ ವ್ಯಾಕ್ಸಿನ್ ಡೋಸ್ ಬರಲಿವೆ. ಇದರಿಂದ ವ್ಯಾಕ್ಸಿನ್ ಕೊರತೆ ನೀಗಲಿದೆ, ಸರ್ಕಾರದಿಂದಲೇ ಎಲ್ಲರಿಗೂ ಉಚಿತ ವ್ಯಾಕ್ಸಿನ್ ನೀಡಲಾಗುವುದು ಎಂದರು.
ಪಕ್ಕದ 13 ಜಿಲ್ಲೆಗಳಿಂದ ಕೋವಿಡ್ ಗಂಭೀರ ಸ್ಥಿತಿ ತಲುಪಿದ ರೋಗಿಗಳನ್ನು ಹುಬ್ಬಳ್ಳಿಯ ಕಿಮ್ಸ್ ಸೇರಿದಂತೆ ಇತರೆ ಆಸ್ಪತ್ರೆ ದಾಖಲಿಸುತ್ತಾರೆ. ಹೀಗಾಗಿ ಜಿಲ್ಲೆಯಲ್ಲಿ ಮರಣದ ಪ್ರಮಾಣ ಹೆಚ್ಚಾಗಿದೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಯನ್ನು ಎ.ಬಿ.ಆರ್.ಕೆ ನೀಡಬೇಕು ಎಂದರು.
ಕಿಮ್ಸ್‍ನಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರ ಪೈಕಿ ಶೇ.65ರಷ್ಟು ಜನರಿಗೆ ಸರ್ಜರಿ ಆಗಿದೆ. ಬೇರೆ ಜಿಲ್ಲೆಗಳಿಂದ ರೋಗಿಗಳು ಸರ್ಜರಿಗೆ ಆಗಮಿಸುತ್ತಾರೆ. ಸರ್ಜರಿ ಅನುಕೂಲವಾಗುವ ವೈದ್ಯಕೀಯ ಪರಿಕರಗಳನ್ನು ಕಿಮ್ಸ್‍ಗೆ ಒದಗಿಸಬೇಕು. ಲಾಕ್‍ಡೌನ್ ಮುಂದುವರಿದರೆ ಆಹಾರ ಪದಾರ್ಥಗಳ ಸರಬರಾಜು ಸರಪಳಿಗೆ ತೊಂದರೆ ಆಗಲಿದೆ. ಹೀಗಾಗಿ ಕಿರಾಣಿ ಅಂಗಡಿಗಳಿಗೆ ಲಾಕ್‍ಡೌನ್‍ನಲ್ಲಿ ವಿನಾಯಿತಿ ನೀಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಹೆಚ್ಚಿನ ದರ ಪಡೆಯುತ್ತಾರೆ. ಇದಕ್ಕೆ ಕಡಿವಾಣ ಹಾಕುವಂತೆ ಶಾಸಕ ಪ್ರಸಾದ್ ಅಬ್ಬಯ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿ, ಕುಂದಗೋಳ ತಾಲೂಕಿನಲ್ಲಿ ವೈದ್ಯರ ಕೊರತೆ ನೀಗಿಸುವಂತೆ ಕೋರಿದರು.
ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಸಭೆಯಲ್ಲಿ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಕಳೆದ ಮೇ ಮೊದಲ ವಾರದಲ್ಲಿ ಕೋವಿಡ್ ಪಾಸಿಟಿವ್ ದರ ಶೇ.39.2 ಕ್ಕೆ ಏರಿತ್ತು. ವ್ಯಾಪಕ ನಿಯಂತ್ರಣ ಕ್ರಮಗಳಿಂದ ಇದೀಗ ಅದು 11.9ಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಇದೀಗ 4,385 ಸಕ್ರಿಯ ಪ್ರಕರಣಗಳಿವೆ. 600 ಜನ ಕೋವಿಡ್ ಕೇರ್ ಸೆಂಟರ್ ಗಳಲ್ಲಿ, 1,500 ಜನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಕ್ಷಣರಹಿತ ಸೋಂಕಿತರು ಮನೆಗಳಲ್ಲಿ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ 20 ಲಕ್ಷ ಜನಸಂಖ್ಯೆಯಲ್ಲಿ ಸುಮಾರು 9 ಲಕ್ಷ ಜನರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ. ಕಳೆದ 10 ದಿನಗಳಲ್ಲಿ ನಗರ ಪ್ರದೇಶದ ಶೇ.41 ಹಾಗೂ ಗ್ರಾಮೀಣ ಪ್ರದೇಶದ ಶೇ.58 ರಷ್ಟು ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಜಿಲ್ಲೆಯ ಆಸ್ಪತ್ರೆಗಳಿಗೆ ರೆಮ್‍ಡಿಸಿವಿರ್ ಹಾಗೂ ಅಂಪೊಟೋರಿಸಿನ್-ಬಿ ಔಷಧಿಗಳನ್ನು ಸಮಪರ್ಕವಾಗಿ ಪೂರೈಸಲಾಗುತ್ತಿದೆ. ಇದುವರೆಗೆ 3,31,717 ಜನರಿಗೆ ಲಸಿಕೆ ಹಾಕಿಸಲಾಗಿದೆ. ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ 1,215 ಜನರಿಗೆ ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಅಡಿ ಸೌಲಭ್ಯ ಕಲ್ಪಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದಕಾ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಬ್ಲ್ಯಾಕ್ ಫಂಗಸ್ ಗೆ ರಾಜ್ಯ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕದಡಿ ಬ್ಲಾಕ್ ಫಂಗಸ್ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುವುದು. ಕಿಮ್ಸ್‍ನಲ್ಲಿ ಬ್ಲಾಕ್ ಫಂಗಸ್ ಸರ್ಜರಿಗೆ ಬೇಕಾದ ವೈದ್ಯಕೀಯ ಪರಿಕರಗಳನ್ನು ತಕ್ಷಣವೇ ಖರೀದಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಾರಿ ಲಕ್ಷಣದಿಂದ ಆಸ್ಪತ್ರೆಗೆ ದಾಖಲಾಗಿ ಮರಣ ಹೊಂದಿದರೆ ಕೋವಿಡ್ ನಂತಹ ಮರಣ ಎಂದೇ ಪರಿಗಣಿಸಲಾಗುವುದು. ಸಾರಿ ಲಕ್ಷಣಗಳಿಂದ ತಂದೆ, ತಾಯಿ ಮೃತಪಟ್ಟರೆ, ಮಕ್ಕಳಿಗೆ ಸರ್ಕಾರದಿಂದ ಎಲ್ಲ ಸವಲತ್ತುಗಳನ್ನು ನೀಡಲಾಗುವುದು. ಅಂಪೋಟೆರಿಸನ್ ಬಿ ಲಸಿಕೆಯನ್ನು ಕಾಳಸಂತೆ ಮಾರಾಟ ಮಾಡಿದರೆ ಐ.ಎಫ್.ಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಉಪಮುಖ್ಯಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಗಣಿ ಮತ್ತು ಭೂ ವಿಜ್ಞಾನ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ.ಪಾಟೀಲ್, ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಅಧ್ಯಕ್ಷ ಹಾಗೂ ನವಲಗುಂದ ಶಾಸಕ ಶಂಕರ್ ಪಾಟೀಲ್ ಮುನೇನಕೊಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮೋಹನ್ ಲಿಂಬಿಕಾಯಿ, ವಾ.ಕ.ರ.ಸಾ.ಸಂ ಅಧ್ಯಕ್ಷ ವಿ.ಎಸ್.ಪಾಟೀಲ್, ಶಾಸಕರಾದ ಶ್ರೀನಿವಾಸ ಮಾನೆ, ಅರವಿಂದ ಚಂದ್ರಕಾತ್ ಬೆಲ್ಲದ್, ಎಸ್.ವಿ.ಸಂಕನೂರ, ಅಮೃತ ದೇಸಾಯಿ, ಸಿ.ಎಂ.ನಿಂಬಣ್ಣವರ, ಪ್ರದೀಪ್ ಶೆಟ್ಟರ್, ಕೃಷಿ ಉತ್ಪನ್ ರಫ್ತು ನಿಗಮದ ಅಧ್ಯಕ್ಷ ಎಸ್.ಐ.ಚಿಕ್ಕನಗೌಡ್ರ, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಜಿಲ್ಲಾ ಉಸ್ತವಾರಿ ಕಾರ್ಯದರ್ಶಿ ಡಾ.ರವಿಕುಮಾರ್ ಸುರಪುರ, ಜಿ.ಪಂ.ಸಿ.ಇ.ಓ ಡಾ.ಬಿ.ಸುಶೀಲ, ಪೋಲಿಸ್ ಆಯುಕ್ತ ಲಾಬುರಾಮ್, ಪಾಲಿಕೆ ಆಯುಕ್ತ ಡಾ. ಸುರಶ್ ಇಟ್ನಾಳ್, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಡೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಶವಂತ ಮದನೀಕರ್, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗ ಅಂಟರಠಾಣಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.