– ಸುಟ್ಟು ಕರಕಲಾದ ಮೂರು ಅಂತಸ್ತಿನ ಮನೆ
ಬೆಂಗಳೂರು: ಕೆ.ಜಿ.ಹಳ್ಳಿ ಗಲಭೆ ಪ್ರಕರಣದಿಂದ ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಇದನ್ನೂ ಓದಿ: ಕಾವಲ್ ಭೈರಸಂದ್ರ ಉದ್ವಿಗ್ನ – ಪಕ್ಕಾ ಪ್ಲಾನ್ ಮಾಡಿ ವಿಕೃತಿ ಮೆರೆದ ಪುಂಡರು
ಕಾವಲ್ ಭೈರಸಂದ್ರದಲ್ಲಿರುವ ಮೂರು ಅಂತಸ್ತಿನ ಮನೆ ಬೆಂಕಿಗಾಹುತಿಯಾಗಿದೆ. ಶಾಸಕರ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಪಾಳು ಮನೆಯಂತೆ ಭಾಸವಾಗುತ್ತಿದೆ. ಪರಿಣಾಮ ಅಕ್ಕಪಕ್ಕದ ರಸ್ತೆ, ಮನೆಗಳಲ್ಲಿ ನೀರವ ಮೌನ ಆವರಿಸಿದೆ. ಸದ್ಯಕ್ಕೆ ಪೊಲೀಸರು ಕೆಜಿ ಹಳ್ಳಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನ ಬಂದ್ ಮಾಡಿದ್ದಾರೆ.
ಕಿಡಿಗೇಡಿಗಳು ಸ್ಥಳಕ್ಕೆ ಬಂದ ಪೊಲೀಸರು ಮೇಲೂ ದಾಳಿ ಮಾಡಿದ್ದು, ಸಿಕ್ಕ ಸಿಕ್ಕ ವಸ್ತುಗಳಿಗೆಲ್ಲಾ ಬೆಂಕಿ ಹಚ್ಚಿದ್ದರು. ಕೊನೆಗೆ ರಾತ್ರಿಯೆಲ್ಲಾ ಫೀಲ್ಡ್‌ಗೆ ಇಳಿದಿದ್ದ ಪೊಲೀಸರು 110 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ 100ಕ್ಕೂ ಹೆಚ್ಚು ಪೊಲೀಸರಿಗೆ ಗಾಯವಾಗಿದ್ದು, ಗಾಯಗೊಂಡ ಪೊಲೀಸರಿಗೆ ನಗರದ ಹಲವು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಲೆ, ಬೆನ್ನು, ಮುಖಕ್ಕೆ ಸೇರಿದಂತೆ ಹಲವು ಕಡೆ ಗಂಭೀರ ಗಾಯಗಳಾಗಿವೆ.
ಅಲ್ಲದೇ ಈ ಪ್ರಕರಣದಲ್ಲಿ 10ಕ್ಕೂ ಹೆಚ್ಚು ಆರೋಪಿಗಳಿಗೆ ಗಾಯವಾಗಿದ್ದು, 10 ಜನರಲ್ಲಿ 6 ಜನ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆರು ಜನ ಪರಾರಿಯಾಗಿದ್ದಾರೆ. ಈಗಾಗಲೇ ಪೊಲೀಸರ ಗೋಲಿಬಾರ್‌ಗೆ ಮೂರು ಬಲಿಯಾಗಿದ್ದಾರೆ.
ಇಡೀ ಗಲಭೆಗೆ ಕಾರಣವಾಗಿದ್ದ ಆರೋಪಿ ನವೀನ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸಿಕ್ಕಿದರೆ ಹಲ್ಲೆ ಮಾಡುತ್ತಾರೆ ಎಂದು ಪೊಲೀಸರು ಬುರ್ಖಾ ಹಾಕಿ ಬೈಕಿನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ.