– ನಿತ್ಯ ವಾಹನ ಸವಾರರ ಗೋಳು
ಶಿವಮೊಗ್ಗ: ಮಳೆಗಾಲ ಆರಂಭವಾದರೆ ಮಲೆನಾಡಿನ ರಸ್ತೆಗಳ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದ್ದು, ಕೆಸರುಗದ್ದೆಯಂತಹ ರಸ್ತೆಯಲ್ಲಿ ವಾಹನ ಸವಾರರು ಹರಸಾಹಸಪಟ್ಟು ಸಂಚರಿಸುತ್ತಾರೆ. ಅಲ್ಲದೆ ಅಂಬುಲೆನ್ಸ್ ಗಳು ಇದೇ ರಸ್ತೆಯಲ್ಲಿ ಸಿಲುಕಿಕೊಂಡ ಘಟನೆಯೂ ಇವೆ.
ಇಷ್ಟಾದರೂ ಈ ರಸ್ತೆಯನ್ನು ಅಭಿವೃದ್ಧಿಪಡಿಸದೆ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಾಗಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಕ್ಕೋಡು ಗ್ರಾಮದ ಜನರ ಗೋಳಿಡುತ್ತಿದ್ದಾರೆ. ಸರ್ಕಾರ ಪ್ರತಿವರ್ಷ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಣ ಬಿಡುಗಡೆ ಮಾಡುತ್ತದೆ. ಆದರೆ ಹಣ ಎಲ್ಲಿ ಹೋಗುತ್ತೆದೆ. ರಸ್ತೆಗಳು ಎಲ್ಲಿ ಅಭಿವೃದ್ಧಿ ಆಗುತ್ತವೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ ಎಂದು ಸ್ಥಳೀಯರು ದೂರಿಸಿದ್ದಾರೆ.
Advertisement
Advertisement
ಮಳೆಗಾಲ ಆರಂಭವಾಗಿದ್ದು, ಮಲೆನಾಡಿನಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಇದರ ಜೊತೆಗೆ ಗ್ರಾಮ ಪಂಚಾಯಿತಿ ಸಹ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ, ರಸ್ತೆಗೆ ಮಣ್ಣು ಸುರಿದು ತಕ್ಕಮಟ್ಟಿಗಿದ್ದ ರಸ್ತೆಯನ್ನು ಇನ್ನೂ ದುಸ್ಥಿತಿಗೆ ತಳ್ಳಿದೆ. ಕಳೆದ ಮೂರು ದಿನದ ಹಿಂದೆ ಗ್ರಾಮದ ರೋಗಿಯೊಬ್ಬರನ್ನು ಆಸ್ಪತ್ರೆಗೆ ಸಾಗಿಸಲು ಗ್ರಾಮಕ್ಕೆ ಅಂಬುಲೆನ್ಸ್ ಬಂದಿತ್ತು. ಕೆಸರು ತುಂಬಿದ್ದ ರಸ್ತೆಯಲ್ಲಿ ಅಂಬುಲೆನ್ಸ್ ಸಿಲುಕಿದ ಪರಿಣಾಮ ರೋಗಿಯನ್ನು ಸಾಗಿಸಲು ಗ್ರಾಮಸ್ಥರು ಪರದಾಡಿದ್ದಾರೆ. ನಂತರ ಕೆಸರು ತುಂಬಿದ್ದ ರಸ್ತೆಯಲ್ಲಿ ದೂರದಲ್ಲೇ ಅಂಬುಲೆನ್ಸ್ ನಿಲ್ಲಿಸಿ, ರೋಗಿಯನ್ನು ಅಂಬುಲೆನ್ಸ್ ಬಳಿಗೆ ಗ್ರಾಮಸ್ಥರು ಹೊತ್ತೊಯ್ದಿದ್ದಾರೆ. ಈ ಕಷ್ಟ ನೋಡಲಾರದೆ ಗ್ರಾಮಸ್ಥರು ಶಾಶ್ವತ ರಸ್ತೆ ನಿರ್ಮಿಸುವಂತೆ ಆಗ್ರಹಿಸಿದ್ದಾರೆ.