ನವದೆಹಲಿ: ಭಾರತದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್ ರಫ್ತುದಾರ ಕಂಪನಿ ಎಚ್‌ಸಿಎಲ್ ಟೆಕ್ನಾಲಜೀಸ್ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಸ್ಥಾನದಿಂದ 75 ವರ್ಷದ ಶಿವ ನಡಾರ್ ಇಳಿದಿದ್ದು, 38 ವರ್ಷದ ಪುತ್ರಿ ರೋಶನಿ ನಡಾರ್ ಹುದ್ದೆಯನ್ನು ಅಲಂಕರಿಸಿದ್ದಾರೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ ಎಚ್‌ಸಿಎಲ್ ಕಂಪನಿ, ಶಿವ ನಡಾರ್ ಅವರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಮುಂದುವರಿಯಲಿದ್ದು, ಮುಖ್ಯ ಕಾರ್ಯತಂತ್ರ ಅಧಿಕಾರಿಯಾಗಿರಲಿದ್ದಾರೆ. ಶಿವ ನಡಾರ್ ಅವರು ಹುದ್ದೆ ತ್ಯಜಿಸುವ ಇಚ್ಚೆ ವ್ಯಕ್ತಪಡಿಸಿದ್ದರಿಂದ ನಿರ್ದೇಶಕರ ಮಂಡಳಿಯು ರೋಶನಿ ನಡಾರ್ ಮಲ್ಹೊತ್ರಾ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಜುಲೈ 17ರಿಂದಲೇ ಇದು ಜಾರಿಗೆ ಬರಲಿದೆ ಎಂದು ತಿಳಿಸಿದೆ.
Advertisement
Advertisement
ಜೂನ್‌ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ ಶೇ.4ರಷ್ಟು ಕುಸಿತವಾಗಿತ್ತು. ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ 18,590 ಕೋಟಿ ರೂ. ನಿವ್ವಳ ಆದಾಯ ಗಳಿಸಿದ್ದರೆ, ಜೂನ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ 17,841 ಕೋಟಿ ರೂ. ಗಳಿಸಿತ್ತು. ನಿವ್ವಳ ಲಾಭದಲ್ಲೂ ಎಚ್‌ಸಿಎಲ್ ಶೇ 7.3ರಷ್ಟು ಕುಸಿತ ಕಂಡಿದೆ. ಅವಧಿಯಲ್ಲಿ ಕಂಪನಿಯ ನಿವ್ವಳ ಲಾಭ 3,154 ಕೋಟಿ ರೂ. ಆಗಿದ್ದರೆ ಜೂನ್ ತ್ರೈಮಾಸಿಕದಲ್ಲಿ 2,925 ಕೋಟಿ ರೂ. ಗಳಿಸಿತ್ತು.
Advertisement
ರೋಶನಿ ನಡಾರ್ ಯಾರು?
ಫೋರ್ಬ್ಸ್ ನಿಯತಕಾಲಿಕೆ 2019ರಲ್ಲಿ ಪ್ರಕಟಿಸಿದ ವಿಶ್ವದ 100 ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ರೋಶನಿ 54ನೇ ಸ್ಥಾನ ಪಡೆದಿದ್ದರು. ಹುರುನ್ ಇಂಡಿಯಾ ಶ್ರೀಮಂತ ಭಾರತೀಯರ ಪಟ್ಟಿಯಯಲ್ಲಿ 36,800 ಕೋಟಿ ರೂ. ಸಂಪತ್ತು ಹೊಂದುವ ಮೂಲಕ ಭಾರತದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದರು.
Advertisement
ಶಿವ ನಡಾರ್ ಅವರ ಏಕೈಕ ಪುತ್ರಿಯಾಗಿರುವ ರೋಶನಿ ಆರಂಭದಲ್ಲಿ ದೆಹಲಿಯ ವಸಂತ್ ವ್ಯಾಲಿ ಶಾಲೆಯಲ್ಲಿ ಓದಿದ್ದಾರೆ. ಬಳಿಕ ಅಮೆರಿಕದ ಇಲಿನಾಯ್ಸ್ನ ವಿಶ್ವವಿದ್ಯಾಲಯದಿಂದ ಪದವಿ ಪಡೆದು, ಕೆಲ್ಲಾಗ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಎಂಬಿಎ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಎಚ್‌ಸಿಎಲ್‌ಗೆ ಸೇರುವ ಮೊದಲು ಅವರು ವಿವಿಧ ಕಂಪನಿಗಳಲ್ಲಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಎಚ್‌ಸಿಎಲ್‌ಗೆ ಸೇರ್ಪಡೆಯಾದ ಒಂದು ವರ್ಷದೊಳಗೆ 2013 ರಲ್ಲಿ ಮಂಡಳಿಯಲ್ಲಿ ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು.
ಎಚ್‌ಸಿಎಲ್ ಕಾರ್ಪೊರೇಶನ್‌ನ ಸಿಇಒ ಆಗುವ ಮೊದಲು ಅವರು ಶಿವ ನಡಾರ್ ಫೌಂಡೇಶನ್‌ನ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಜನರಿಗೆ ನಾಯಕತ್ವ ಕಲೆ ಕಲ್ಪಿಸುವ ವಿದ್ಯಾಜ್ಞಾನ ಲೀಡರ್‌ಶಿಪ್ ಅಕಾಡೆಮಿಯ ಅಧ್ಯಕ್ಷರಾಗಿದ್ದಾರೆ. ರೋಶನಿಯವರು ಶಾಸ್ತ್ರೀಯ ಸಂಗೀತವವನ್ನು ಅಭ್ಯಾಸ ಮಾಡಿದ್ದಾರೆ.
2010 ರಲ್ಲಿ ಶಿಖರ್ ಮಲ್ಹೋತ್ರಾ ಅವರನ್ನು ರೋಶನಿ ಮದುವೆಯಾಗಿದ್ದಾರೆ. ಶಿಖರ್ ಎಚ್‌ಸಿಎಲ್ ಹೆಲ್ತ್‌ಕೇರ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಂಪತಿಗೆ ಇಬ್ಬರು ಪುತ್ರರಿದ್ದಾರೆ.
2017, 2018 ಮತ್ತು 2019 ರಲ್ಲಿ ಫೋರ್ಬ್ಸ್ ಮ್ಯಾಗಜಿನ್ ಪ್ರಕಟಿಸಿದ ಜಗತ್ತಿನ 100 ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 2017 ರಲ್ಲಿ ಬಾಬ್ಸನ್ ಕಾಲೇಜು ಲೂಯಿಸ್ ಇನ್‌ಸ್ಟಿಟ್ಯೂಟ್ ಕಮ್ಯುನಿಟಿ ಚೇಂಜ್ ಮೇಕರ್ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿತ್ತು. ಅಂತರರಾಷ್ಟ್ರೀಯ ಖ್ಯಾತಿಯ ಥಿಂಕ್ ಟ್ಯಾಂಕ್ ಹೊರಾಸಿಸ್ 2019ರಲ್ಲಿ ಭಾರತದ ಬಿಸಿನೆಸ್ ಲೀಡರ್ ಪ್ರಶಸ್ತಿಯನ್ನು ನೀಡಿತ್ತು.