ನವದೆಹಲಿ: ಬರೋಬ್ಬರಿ ನಾಲ್ಕು ತಿಂಗಳ ಬಳಿಕ ಟಿವಿ ಪರದೆಯ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನೋಡುವ ಅವಕಾಶ ಲಭಿಸಿದೆ. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಟೂರ್ನಿಯ ಮೊದಲ ಪಂದ್ಯ ಇಂದು ನಡೆಯಲಿದೆ. ಇದೇ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಆಟದ ನಿಯಮಗಳಲ್ಲಿ ಕೆಲ ಮಧ್ಯಂತರ ಬದಲಾವಣೆಗಳನ್ನು ಮಾಡಿ ಮಾಹಿತಿ ನೀಡಿದೆ.
ಪಂದ್ಯದ ವೇಳೆ ಚೆಂಡು ಹೊಳೆಯುವಂತೆ ಮಾಡಲು ಲಾಲಾರಸ(ಎಂಜಲು) ಹಾಕುವುದನ್ನು ನಿಷೇಧಿಸಿದೆ. ಅಲ್ಲದೇ ಅಂತಾರಾಷ್ಟ್ರೀಯ ಟೂರ್ನಿಗಳ ಪಂದ್ಯಗಳಲ್ಲಿ ಹೋಂ ಅಂಪೈರ್ ಗಳಿಗೆ ಅವಕಾಶ ಕಲ್ಪಿಸಿದೆ.
Advertisement
Advertisement
ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಸಮಿತಿಯ ಶಿಫಾರಸುಗಳನ್ನು ಮಂಡಳಿ ಅಂಗೀಕರಿಸಿದೆ. ಕೋವಿಡ್-19 ನಿಂದ ಉಂಟಾಗುತ್ತಿರುವ ಅಪಾಯವನ್ನು ತಗ್ಗಿಸಲು ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಚುಟುವಟಿಕೆಗಳನ್ನು ಪುನರ್ ಆರಂಭಿಸಲು ಸೇರಿದಂತೆ ಆಟಗಾರರು ಮತ್ತು ಅಧಿಕಾರಿಗಳ ಸುರಕ್ಷತೆಯ ಉದ್ದೇಶದಿಂದ ಶಿಫಾರಸುಗಳನ್ನು ಜಾರಿಗೊಳಿಸಿದೆ.
Advertisement
ಕೋವಿಡ್-19 ರಿಪ್ಲೇಸ್‍ಮೆಂಟ್: ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಕೋವಿಡ್-19 ಲಕ್ಷಣ ಹೊಂದಿರುವ ಆಟಗಾರರ ಬದಲಿಸಲು ತಂಡಗಳಿಗೆ ಅವಕಾಶ ನೀಡಲಾಗಿದೆ. ಪಂದ್ಯದ ರೆಫರಿ ಬದಲಿ ಆಟಗಾರರನ್ನು ತಂಡಗಳು ಪಡೆಯಲು ಅನುಮತಿ ನೀಡುತ್ತಾರೆ. ಆದರೆ ಈ ಕೋವಿಡ್-19 ಬದಲಿ ನಿಯಮ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಅನ್ವಯವಾಗುವುದಿಲ್ಲ.
Advertisement
ಎಂಜಲು ಬಳಕೆ ನಿಷೇಧ: ಬೌಲರ್ ಗಳು ಚೆಂಡಿನ ಒಳಪು ಹೆಚ್ಚಿಸಲು ಲಾಲಾರಸ (ಎಂಜಲು) ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಆದರೂ ಆಟಗಾರ ಚೆಂಡಿನ ಹೊಳಪು ಹೆಚ್ಚಿಸಲು ಲಾಲಾರಸ ಬಳಸಿದರೆ ಅಂಪೈರ್ ಸಂದರ್ಭವನ್ನು ನಿಭಾಯಿಸುತ್ತಾರೆ. ಆದರೆ ಈ ವರ್ತನೆ ಪುನರವರ್ತನೆಯಾದರೆ ಅಂಪೈರ್ ತಂಡಕ್ಕೆ ಎಚ್ಚರಿಕೆ ನೀಡುತ್ತಾರೆ.
ಪಂದ್ಯದ ಸಂದರ್ಭದಲ್ಲಿ ಅಂಪೈರ್ ಗಳು ಎರಡು ಬಾರಿ ಎಚ್ಚರಿಕೆ ನೀಡುತ್ತಾರೆ. ಆ ಬಳಿಕವೂ ನಿಯಮ ಉಲ್ಲಂಘಿಸಿದರೆ ತಂಡಕ್ಕೆ 5 ರನ್ ದಂಡ ವಿಧಿಸಬಹುದಾಗಿದೆ. ಪ್ರತಿ ಬಾರಿ ಆಟಗಾರ ಎಂಜಲು ಬಳಸಿದ ಸಂದರ್ಭದಲ್ಲಿ ಆಟ ಆರಂಭವಾಗುವ ಮುನ್ನ ಅಂಪೈರ್ ಚೆಂಡಿನ ಸ್ವಚ್ಛತೆಗೆ ಸೂಚಿಸಬೇಕಾಗುತ್ತದೆ.
ತಟಸ್ಥರಲ್ಲದ ಅಂಪೈರ್: ಸದ್ಯದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಪ್ರಯಾಣದ ಸವಾಲು ಎದುರಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ ಪಂದ್ಯಗಳಿಂದ ಅಂತಾರಾಷ್ಟ್ರೀಯ ತಟಸ್ಥ ಅಂಪೈರ್ (ಅತಿಥೇಯ ದೇಶದ) ನೇಮಿಸುವ ನಿಯಮಗಳನ್ನು ತಾತ್ಕಾಲಿಕವಾಗಿ ತೆಗೆದು ಹಾಕಲಾಗಿದೆ. ಐಸಿಸಿ ಸ್ಥಳೀಯ ಪಂದ್ಯದ ಅಧಿಕಾರಿಗಳನ್ನು ನೇಮಿಸಲಿದೆ. ಎಮಿರೇಟ್ಸ್ ಐಸಿಸಿ ಎಲೈಟ್ ಮತ್ತು ಎಮಿರೇಟ್ಸ್ ಐಸಿಸಿ ಇಂಟರ್ ನ್ಯಾಷನಲ್ ಪ್ಯಾನಲ್ ಆಫ್ ಮ್ಯಾಚ್ ಆಫೀಸಿಯಲ್ಸ್ ಆಧಾರ ಮೇಲೆ ಅಂಪೈರ್‍ಗಳನ್ನು ನೇಮಕ ಮಾಡಲಾಗುತ್ತದೆ.
ಹೆಚ್ಚುವರಿ ಡಿಆರ್‌ಎಸ್ ಮನವಿ: ಪಂದ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಪೈರ್ ಗಳ ಅನುಭವದ ಆಧಾರದ ಮೇಲೆ ತಂಡಗಳಿಗೆ ಹೆಚ್ಚಿನ ಡಿಆರ್‌ಎಸ್ (ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ) ಮನವಿಗಳಿಗೆ ಅವಕಾಶ ನೀಡಲಾಗುತ್ತದೆ. ಟೆಸ್ಟ್ ಪಂದ್ಯಗಳಲ್ಲಿ ಪ್ರತಿ ತಂಡಕ್ಕೆ ಮೂರು ಮತ್ತು ಸೀಮಿತ ಓವರ್ ಗಳ ಮಾದರಿಯಲ್ಲಿ ಪ್ರತಿ ತಂಡಕ್ಕೆ ಹೆಚ್ಚುವರಿಯಾಗಿ 2 ಅವಕಾಶಗಳನ್ನು ನೀಡಬಹುದಾಗಿದೆ.
ಹೆಚ್ಚುವರಿ ಲೋಗೋ: ಮುಂದಿನ 12 ತಿಂಗಳ ಕಾಲ ಹೆಚ್ಚುವರಿ ಲೋಗೋ ಬಳಕೆಗೂ ಅವಕಾಶ ನೀಡಲಾಗಿದೆ. ಲೋಗೋ 32 ಚದರ ಇಂಚುಗಳನ್ನು ಮೀರುವಂತಿಲ್ಲ ಎಂಬ ನಿಯಮವಿದ್ದು, ಲೋಗೋವನ್ನು ಟೆಸ್ಟ್ ಪಂದ್ಯದ ಶರ್ಟ್, ಸ್ವೆಟರ್ ನ ಎದೆಯ ಮೇಲೆ ಇತರ ಮೂರು ಲೋಗೋಗಳ ಜೊತೆಗೆ ಇರಿಸಲು ಅವಕಾಶ ನೀಡಲಾಗಿದೆ. ಸದ್ಯದವರೆಗೂ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಮಾತ್ರ ಬಳಸಲು ಅನುಮತಿ ನೀಡಲಾಗಿದೆ.