ಮಡಿಕೇರಿ: ಕಾಫಿ ತೋಟ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಓರ್ವ ಗಂಭೀರ ಗಾಯಗೊಂಡಿದ್ದು, ಮತ್ತೋರ್ವ ಪ್ರಾಣಾಪಾಯದಿಂದ ಪಾರಾದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬರಡಿ ಗ್ರಾಮದಲ್ಲಿ ನಡೆದಿದೆ.
ಕಾಡಾನೆ ದಾಳಿಯಿಂದ ಗಾಯಗೊಂಡ ಸುರೇಂದ್ರ(50) ಸಿದ್ದಾಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಮತ್ತೋರ್ವ ಕಾರ್ಮಿಕ ಜನಾರ್ದನ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Advertisement
Advertisement
ಕಾಡಾನೆ ಹಾವಳಿಯಿಂದ ಗ್ರಾಮಸ್ಥರಲ್ಲಿ ಇದೀಗ ಆತಂಕ ಮನೆ ಮಾಡಿದೆ. ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿ ಪಂಚಾಯಿತಿ ವ್ಯಾಪ್ತಿಯ ಬರಡಿ ಗ್ರಾಮದಲ್ಲಿ ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಹಠಾತ್ ದಾಳಿ ಮಾಡಿದೆ. ವಿಷಯ ತಿಳಿದ ಸ್ಥಳೀಯರು, ಸ್ಥಳಕ್ಕೆ ಆಗಮಿಸಿದ ವೇಳೆ ಕಾಡಾನೆ ಕಾಫಿ ತೋಟದತ್ತ ತೆರಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Advertisement
ಕೆಲ ದಿನಗಳಿಂದ ಗ್ರಾಮ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಡಾನೆಯಿಂದ ರೈತರ ಕೃಷಿ ಫಸಲು ನಾಶವಾಗುತ್ತಿದ್ದು, ಕಾರ್ಮಿಕರ ಮೇಲೆ ನಿರಂತರ ದಾಳಿಮಾಡುತ್ತಿದೆ. ಕಾಡಾನೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ವಿಫಲವಾಗಿದ್ದು, ಶಾಶ್ವತವಾಗಿ ಕಾಡಾನೆ ಹಾವಳಿ ತಡೆಗಟ್ಟಲು ಕಾರ್ಮಿಕ ಸಂಘಟನೆಯ ಮುಖಂಡ ಪಿ.ಆರ್. ಭರತ್ ಒತ್ತಾಯಿಸಿದರು.
Advertisement
ಉಪವಲಯ ಅರಣ್ಯಾಧಿಕಾರಿ ಸುಬ್ರಾಯ, ಅರಣ್ಯ ರಕ್ಷಕ ಚರಣ್ ಆಸ್ಪತ್ರೆಗೆ ಭೇಟಿ ನೀಡಿ ಹೆಚ್ಚಿನ ಚಿಕಿತ್ಸೆಗೆ ಸುರೇಂದ್ರರನ್ನು ಮಡಿಕೇರಿಗೆ ದಾಖಲಿಸಿದ್ದಾರೆ. ವಲಯ ಅರಣ್ಯಾಧಿಕಾರಿ ಸುಬ್ರಾಯ ಪತ್ರಿಕೆಯೊಂದಿಗೆ ಮಾತನಾಡಿ ಅರಣ್ಯದಂಚಿನಲ್ಲಿ ಅಳವಡಿಸಲಾಗಿರುವ ಸೋಲಾರ್ ವಿದ್ಯುತ್ ತಂತಿ ಮೇಲೆ ಮಳೆಯಿಂದ ಮರ ಬಿದ್ದು ತುಂಡಾಗಿದೆ. ಕಾಡಾನೆಯೊಂದು ಬರಡಿ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ತಕ್ಷಣ ಕಾಡಿಗಟ್ಟುವ ಕಾರ್ಯಾಚರಣೆ ಮಾಡಲಾಗುವುದು ಎಂದು ಹೇಳಿದರು.