– ಚಿತ್ರರಂಗಕ್ಕೆ ಬಂದು 35 ವರ್ಷ ಪೂರ್ಣ
– ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೆ ಗೊತ್ತಿರಲ್ಲ
ಬೆಂಗಳೂರು: ಕೆಲವು ಸಿನಿಮಾಗಳು ಗೆದ್ದಿವೆ, ಕೆಲವು ಸೋತಿವೆ. ಸಿನಿಮಾ ಸಕ್ಸಸ್ ಸೂತ್ರ ಗೊತ್ತಾಗಿಲ್ಲ, ಗೊತ್ತಾಗಿದಿದ್ದರೆ ದೇವರು ಆಗಿಬಿಡುತ್ತಿದ್ದೇವು. ಈ ಹೆಸರು, ಸ್ಟಾರ್ ಡಮ್ ಎಲ್ಲವೂ ಅಭಿಮಾನಿಗಳಿಂದ ಸಿಕ್ಕಿದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ.
ಸಿನಿಮಾರಂಗಕ್ಕೆ ಬಂದು 35 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಶಿವರಾಜ್ಕುಮಾರ್ ಸಂಭ್ರಮಿಸಿದ್ದಾರೆ. ಈ ಸಂಭ್ರಮದಲ್ಲಿ ಅಭಿಮಾನಿಗಳು ಶಿವಣ್ಣನಿಗೆ ಮಲ್ಲಿಗೆ ಹೂವಿನ ಕಿರೀಟ ಹಾಗೂ ಹಾರ ಹಾಕಿ ಸನ್ಮಾನಿಸಿದರು.
ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೆ ಗೊತ್ತಿರಲ್ಲ. ಅದೇ ಧೈರ್ಯದಲ್ಲಿ ಯಾರೇ ಕಥೆ ಹೇಳಿದರೂ ಒಪ್ಪಿ ಸಿನಿಮಾ ಮಾಡುತ್ತೇನೆ. ಸ್ಟಾರ್ ನಿರ್ದೇಶಕರು, ಹೊಸಬರು, ಹಿರಿಯ ನಿರ್ದೇಶಕರು ಅನ್ನುವ ಭೇದವಿಲ್ಲ ಎಂದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿಮ್ಮೆಲ್ಲರ ಪ್ರೀತಿಯಿಂದ ನನಗೆ ಇಷ್ಟು ಎನರ್ಜಿಯನ್ನು ನೀಡಿದೆ. ಈ ಹೆಸರು, ಸ್ಟಾರ್ ಡಮ್ ಎಲ್ಲವೂ ಅಭಿಮಾನಿಗಳಿಂದ ಸಿಕ್ಕಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಚಿತ್ರರಂಗದಲ್ಲಿ ಕೈಹಿಡಿದು ನಡೆಸಿದ ಎಲ್ಲರಿಗೂ ಧನ್ಯವಾದಗಳು. ಚಿತ್ರರಂಗ, ಅಭಿಮಾನಿಗಳು, ಮಾಧ್ಯಮ ಎಲ್ಲರ ಸಹಕಾರದಿಂದ ಇಷ್ಟು ವರ್ಷ ಸಿನಿಮಾರಂಗದಲ್ಲಿ ಪೂರೈಸಿದ್ದೇನೆ. ನಿಮ್ಮೆಲ್ಲರ ಪ್ರೀತಿ ನನಗೆ ಇಷ್ಟು ಎನರ್ಜಿಯನ್ನು ನೀಡಿದೆ. ಚಲನಚಿತ್ರಮಂಡಳಿ, ಕುಟುಂಬ, ನಿರ್ದೆಶಕರು, ನಿರ್ಮಾಪಕರು ಎಲ್ಲರಿಗೂ ಧನ್ಯವಾದವನ್ನು ಅವರು ತಿಳಿಸಿದರು.
ಕೊರೊನಾ ಸಮಯದಲ್ಲಿ ಎಲ್ಲರೂ ಹೋರಾಟ ಮಾಡಿದ್ದೇವೆ. ನಿಧಾನವಾಗಿ ಎಲ್ಲವೂ ಸಹಜ ಸ್ಥಿತಿಗೆ ಬರ್ತಿದೆ. ಎಲ್ಲರೂ ಅವರ ಕೈಲಾದ ಸಹಾಯ ಮಾಡಿದ್ದಾರೆ, ನಾನು ಮಾಡಿದ್ದೇನೆ. ಸೆಲೆಬ್ರೆಷನ್ ಅವರ ಪ್ರೀತಿಗಾಗಿ ಮಾಡುತ್ತಾರೆ. ನಾವು ಬೇರೆಯವರಿಗೆ ಮಾದರಿಯಾಗಿರಬೇಕು. ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಎಲ್ಲರ ಪ್ರೀತಿ ಬೆಂಬಲ ನನಗೆ ಸಿಗುತ್ತಿದೆ ಹಾಗಾಗಿ ನಾನು 35 ವರ್ಷ ಪೂರೈಸಿದ್ದೇನೆ. ವಯಸ್ಸು ಮುಖ್ಯವಲ್ಲ, ಅಭಿಮಾನಿಗಳ ಕ್ರೇಜ್ ಎಲ್ಲದಕ್ಕೂ ಕಾರಣ ಎಂದು ಹೇಳಿದ್ದಾರೆ.