ಬೆಂಗಳೂರು: ನಗರ, ಜಿಲ್ಲೆ ಕೆರೆಗಳನ್ನು ಶಾಶ್ವತ ಆಸ್ತಿಯನ್ನಾಗಿ ಅಭಿವೃದ್ಧಿಪಡಿಸಿ ನಮ್ಮ ಮುಂದಿನ ಪೀಳಿಗೆಗೆ ಸುರಕ್ಷಿತ ಪರಿಸರ ಉಳಿಸುವುದು ನಮ್ಮ ಜವಾಬ್ದಾರಿ. ಹಾಗಾಗಿ ಜಿಲ್ಲೆಯ ಎಲ್ಲ ಕೆರೆಗಳ ಸರ್ವೆ ಕಾರ್ಯ ಕೈಗೊಂಡು ಒತ್ತುವರಿಯನ್ನು ಕೂಡಲೇ ತೆರವುಗೊಳಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಾದ ಜೆ ಮಂಜುನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಂದು ತಮ್ಮ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಕೆರೆಗಳ ಅಭಿವೃದ್ಧಿ ಕುರಿತು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೆರೆಗಳ ಸುತ್ತ ಗಡಿ ಗುರುತಿಸಿ, ಅದರ ಸುತ್ತ ಇರುವ ಬಫರ್ ಝೋನ್ ಪ್ರದೇಶದಲ್ಲಿ ಯಾವುದೇ ಕಟ್ಟಡ ಅಥವಾ ಇತರೆ ಕಾಮಗಾರಿಗಳಿಗೆ ಅನುಮತಿ ನೀಡುವಂತ್ತಿಲ್ಲ. ಈ ಬಗ್ಗೆ ಕೂಡಲೇ ಸರ್ವೆ ನಡೆಸಿ ಒತ್ತುವರಿ ಮಾಹಿತಿ ನೀಡುವಂತೆ ಅವರು ಸೂಚಿಸಿದರು.
Advertisement
Advertisement
ಕೆರೆಗಳಿಗೆ ನೀರು ಪೂರೈಸುವ ರಾಜಕಾಲುವೆಗಳ ಒತ್ತುವರಿಯನ್ನೂ ಸಹ ಕೂಡಲೆ ತೆರವುಗೊಳಿಸಬೇಕು ಎಂದ ಜಿಲ್ಲಾಧಿಕಾರಿಗಳು, ನಾಳೆಯೊಳಗೆ ಈ ಸಂಪೂರ್ಣ ಕಾರ್ಯ ನಿರ್ವಹಿಸಲು ವೇಳಾಪಟ್ಟಿ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
Advertisement
ಜಿಲ್ಲೆಯಲ್ಲಿ ಒಟ್ಟು 836 ಕೆರೆಗಳಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ 204 ಕೆರೆಗಳು, ಸಣ್ಣ ನೀರಾವರಿ ಇಲಾಖೆಗೆ 46 ಕೆರೆಗಳು, ಜಿಲ್ಲಾ ಪಂಚಾಯ್ತಿಗೆ 421, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಐದು ಹಾಗೂ ಅರಣ್ಯ ಇಲಾಖೆ ವ್ಯಾಪ್ತಿಗೆ ಒಂದು ಕೆರೆ ಸೇರುತ್ತದೆ. ಉಳಿದ ಕೆರೆಗಳು ಯಾವ ಇಲಾಖೆಗೆ ಸೇರುತ್ತದೆ ಎಂಬ ಬಗ್ಗೆ ನಿರ್ಧರಿಸಲು ಸಮೀಕ್ಷೆ ನಡೆಸಲು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು. ಇದನ್ನೂ ಓದಿ: ಪ್ರವಾಸಿ ಮಾರ್ಗದರ್ಶಿಗಳಿಗೆ 5 ಸಾವಿರ ರೂ. ಕೋವಿಡ್ ಪರಿಹಾರ – ಯೋಗೇಶ್ವರ್
Advertisement
ಬೆಂಗಳೂರು ಕೇವಲ ಸಿಲಿಕಾನ್ ವ್ಯಾಲಿಯಾಗಿ ಜಾಗತಿಕವಾಗಿ ಬ್ರಾಂಡ್ ಆಗುವುದು ಮಾತ್ರವಲ್ಲ, ಆರೋಗ್ಯಕರ ಪರಿಸರವನ್ನು ನಿವಾಸಿಗಳಿಗೆ ಒದಗಿಸಿ ಜೀವನ ಗುಣಮಟ್ಟವನ್ನು ಉತ್ತಮಗೊಳಿಸುವಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಅವರು ಸೂಚಿಸಿದರು.
ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಳಿಸಿದಲ್ಲಿ ಕೈಗಾರಿಕೆಗಳಿಗೆ ಅವುಗಳನ್ನು ಅಭಿವೃದ್ಧಿ ಪಡಿಸಲು ನೀಡಲಾಗುವುದು ಎಂದ ಅವರು, ಸರ್ಕಾರದ ಮಟ್ಟದಲ್ಲಿ ಪ್ರತಿ 15 ದಿನಗಳಿಗೊಮ್ಮೆ ಕೆರೆ ಅಭಿವೃದ್ಧಿ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಅನುಷ್ಠಾನ ಇಲಾಖೆಗಳು ಕ್ರಿಯಾಶೀಲರಾಗುವುದು ಅತ್ಯಗತ್ಯ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಗಪ್ಪ, ಅಪರ ಜಿಲ್ಲಾಧಿಕಾರಿ ಅನಿತಾ ಲಕ್ಷ್ಮೀ, ಉತ್ತರ ವಿಭಾಗಾಧಿಕಾರಿ ರಂಗನಾಥ್, ದಕ್ಷಿಣ ಉಪವಿಭಾಗಾಧಿಕಾರಿ ಡಾ. ಶಿವಣ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀನಿವಾಸ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.