ರಾಯಚೂರು: ಕಾರ್ಖಾನೆಗಳ ವಿಷಕಾರಿ ತ್ಯಾಜ್ಯವನ್ನು ಕೆರೆಗೆ ಸುರಿಯಲು ಬಂದಿದ್ದ ಟ್ಯಾಂಕರ್ ಅನ್ನು ಹಿಡಿದು ಗ್ರಾಮಸ್ಥರೇ ಪೊಲೀಸರಿಗೆ ಒಪ್ಪಿಸಿರುವ ಘಟನೆ ರಾಯಚೂರಿನ ಮನ್ಸಲಾಪುರದಲ್ಲಿ ನಡೆದಿದೆ.
ಕಳೆದ ಒಂದು ವರ್ಷದಿಂದಲೂ ರಾಯಚೂರಿನ ಹೈದರಾಬಾದ್ ರಸ್ತೆಯಲ್ಲಿನ ಕೆಲ ಕಾರ್ಖಾನೆಗಳು ತಮ್ಮ ರಾಸಾಯನಿಕ ತ್ಯಾಜ್ಯವನ್ನು ಕೆರೆಗೆ ಸುರಿಯುತ್ತಿವೆ. ಇದರಿಂದ ಕೆರೆ ನೀರು ವಿಷವಾಗುತ್ತಿದ್ದು ಮೀನುಗಳು ಸಾಯುತ್ತಿವೆ, ಗದ್ದೆಗಳು ಹಾಳಾಗುತ್ತಿದ್ದು ಸರಿಯಾಗಿ ಬೆಳೆ ಬರುತ್ತಿಲ್ಲ. ಮನುಷ್ಯರ ಮೇಲೂ ಈ ರಾಸಾಯನಿಕ ತ್ಯಾಜ್ಯ ಕೆಟ್ಟಪರಿಣಾಮ ಬೀರುತ್ತಿದೆ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ.
Advertisement
Advertisement
ಕಳೆದ ರಾತ್ರಿ ತ್ಯಾಜ್ಯ ಸುರಿಯಲು ಬಂದ ವೇಳೆ ಟ್ಯಾಂಕರ್ ಅನ್ನು ಹಿಡಿದಿದ್ದು, ಚಾಲಕರಿಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ ಅಂತ ಗ್ರಾಮಸ್ಥರು ತಿಳಿಸಿದ್ದಾರೆ. ಕಳೆದ ವರ್ಷ ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳು ಸತ್ತು ಹೋಗಿದ್ದವು. ಭತ್ತದ ಬೆಳೆ ಹಾಳಾಗಿತ್ತು. ಗದ್ದೆಯಲ್ಲಿ ಕೆಲಸ ಮಾಡುವ ರೈತರ ಕೈಗಳಿಗೆ ಬೊಬ್ಬೆಗಳು ಬರುತ್ತಿದ್ದವು. ಈಗ ಮತ್ತೆ ಮಳೆಗಾಲ ಬಂದಿರುವುದರಿಂದ ಕೆರೆ ಹಾಗೂ ಹಳ್ಳ ಇರುವ ಪ್ರದೇಶದಲ್ಲಿ ರಾಸಾಯನಿಕ ತ್ಯಾಜ್ಯ ಸುರಿಯಲು ಕಾರ್ಖಾನೆಗಳು ಮುಂದಾಗಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಘಟನೆ ಹಿನ್ನೆಲೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಗೆ ಗ್ರಾಮಸ್ಥರು ದೂರು ನೀಡಿದ್ದಾರೆ. ಆದರೆ ಈ ಟ್ಯಾಂಕರ್ ಯಾವ ಕಾರ್ಖಾನೆಗೆ ಸೇರಿದ್ದು ಎಂದು ಇನ್ನೂ ತಿಳಿದುಬಂದಿಲ್ಲ.