– ಮನೆಯಲ್ಲಿದ್ದ ಪಾತ್ರೆಗಳೇ ಕರಗಿ ಹೋಗಿದೆ
– ಅನಾಹುತದಲ್ಲಿ ಜೀವ ಉಳಿದಿದ್ದೇ ಹೆಚ್ಚು
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಂಡುಕೇಳರಿಯದ ಬೆಂಕಿ ಅನಾಹುತ ಸಂಭವಿಸಿದ್ದು, ನಿನ್ನೆ ನಗರದ ಹೊಸಗುಡ್ಡದಹಳ್ಳಿಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಂಭವಿಸಿದ್ದ ಅವಘಡದಲ್ಲಿ 19 ಗಂಟೆಯಾದರೂ ಇನ್ನೂ ಬೆಂಕಿ ನಂದಿಲ್ಲ. ಇದೆಲ್ಲದರ ನಡುವೆ ಘಟನೆಯಲ್ಲಿ ಅಕ್ಕ-ಪಕ್ಕದ ಮನೆಗಳು, ವಾಹನಗಳು ಸುಟ್ಟು ಕರಕಲಾಗಿದ್ದು, ಧಗಧಗಿಸಿದ ಬೆಂಕಿಯಿಂದ ಸುಮಾರು 3 ಕೋಟಿ ರೂ.ವರೆಗೂ ನಷ್ಟ ಸಂಭವಿಸಿದೆ ಎಂಬ ಮಾಹಿತಿ ಲಭಿಸಿದೆ.
ಹೊಸಗುಡ್ಡದಹಳ್ಳಿಯಲ್ಲಿಯ ರೇಖಾ ಇಂಡಸ್ಟ್ರಿ ಕೆಮಿಕಲ್ ಫ್ಯಾಕ್ಟರಿಗೆ ಅನುಮತಿಯೇ ಇರಲಿಲ್ಲ ಎನ್ನಲಾಗಿದ್ದು, ಬೊಮ್ಮಸಂದ್ರದಲ್ಲಿ ಫ್ಯಾಕ್ಟರಿಗೆ ಅನುಮತಿ ಪಡೆದಿದ್ದ ಮಾಲೀಕರು ಹೊಸಗುಡ್ಡದಹಳ್ಳಿಲ್ಲೂ ಫ್ಯಾಕ್ಟರಿ ಆರಂಭಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ನಿನ್ನೆಯಿಂದ ಸುಮಾರು 50ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಕಾರ್ಯನಿರ್ವಹಿಸಿದ್ದು, ಈಗಲೂ ಫ್ಯಾಕ್ಟರಿಯ ಹಲವು ಕಡೆ ಬೆಂಕಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ. ಫ್ಯಾಕ್ಟರಿಯ ಹಿಂಭಾಗ ಹಾಗೂ ಸುತ್ತಮುತ್ತ ಇದ್ದ ಹತ್ತಾರು ಮನೆಗಳು, ವಾಹನಗಳು ಅವಘಡದಲ್ಲಿ ಸುಟ್ಟು ಭಸ್ಮವಾಗಿದೆ.
ಘಟನೆ ಕುರಿತಂತೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಸ್ಥಳೀಯರು, ನಿನ್ನೆಯಿಂದ ಬೆಂಕಿ ನಂದಿಸುವ ಕಾರ್ಯವನ್ನ ಮಾಡುತ್ತಿದ್ದಾರೆ. ಬೆಂಕಿ ಹತ್ತಿಕೊಂಡ ತಕ್ಷಣವೇ ಅಕ್ಕಪಕ್ಕದ ಮನೆಯವರನ್ನು ರಕ್ಷಣೆ ಮಾಡುವ ಪ್ರಯತ್ನ ಮಾಡಿದ್ದೆವು. ಇಲ್ಲಿ ಒಂದೇ ಮುಖ್ಯ ರಸ್ತೆ ಇಂದ ಕಾರಣ ಅಗ್ನಿಶಾಮಕ ವಾಹನಗಳು ಬೇಗ ಬರಲು ಆಗಲಿಲ್ಲ. ಆದರೂ ಅವರು ಹೆಚ್ಚು ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಫ್ಯಾಕ್ಟರಿ ಪಕ್ಕದ 2 ಮನೆಗಳು ಬೆಂಕಿಗೆ ಸಂಪೂರ್ಣ ಆಹುತಿಯಾಗಿದೆ. ಅನಾಹುತದಲ್ಲಿ ಜೀವ ಉಳಿದಿದ್ದೇ ಹೆಚ್ಚು ಎಂದು ತಿಳಿಸಿದ್ದಾರೆ.
ಸ್ಥಳೀಯ ವ್ಯಕ್ತಿ ಪ್ರಸನ್ನ ನೀಡಿರುವ ಮಾಹಿತಿ ಅನ್ವಯ, ಘಟನೆ ನಡೆದ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ಯಾರು ಇರಲಿಲ್ಲ. ಸ್ಥಳೀಯ ವ್ಯಕ್ತಿಗಳು ನೀಡಿದ ಮಾಹಿತಿ ಮೇರೆಗೆ ನಾನು ಮನೆ ಬಳಿ ಬಂದೆ. ಆದಾಗಲೇ ಮನೆಗೆ ಬೆಂಕಿ ಹೊತ್ತಿಕೊಂಡಿತ್ತು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದೆ. ಕಳೆದ 5 ವರ್ಷದ ಹಿಂದೆ ಮನೆ ನಿರ್ಮಾಣ ಮಾಡಿದ್ದೇವು. ಮನೆಯಲ್ಲಿ ಇಟ್ಟಿದ್ದ 80 ಸಾವಿರ ನಗದು, ಚಿನ್ನಾಭರಣ ಬೆಂಕಿಯಲ್ಲಿ ಸುಟ್ಟು ಹೋಗಿದೆ. ಮನೆಯಲ್ಲಿದ್ದ ಅಲ್ಯೂಮಿನಿಯಂ ಪಾತ್ರೆಗಳೇ ಬೆಂಕಿಯ ತೀವ್ರತೆಗೆ ಕರಗಿ ಹೋಗಿದೆ ಎಂದರೇ ತೀವ್ರತೆ ಎಷ್ಟಿತ್ತು ಎಂಬ ಅಂದಾಜು ಬರುತ್ತದೆ. ಮನೆಯ ಗೋಡೆಗಳಿಗೆ ಮಾಡಿದ್ದ ಸಿಮೆಂಟ್ ಸಹ ಕಿತ್ತು ಬಂದಿದ್ದು, ಗೋಡೆಗಳು ಬಿರುಕು ಬಿಟ್ಟಿದೆ. ನಮ್ಮ ಮನೆ ಮಾತ್ರವಲ್ಲದೇ ಸುಮಾರು 7 ರಿಂದ 8 ಮನೆಗಳಿಗೆ ನಷ್ಟವಾಗಿದೆ. ಈ ಬಗ್ಗೆ ಪೊಲೀಸ್ ದೂರು ದಾಖಲಿಸಲು ಮುಂದಾಗುತ್ತಿದ್ದೇವೆ ಎಂದು ತಿಳಿಸಿದರು.