– ಪ್ರಶ್ನೆ ಪತ್ರಿಕೆ ಲೀಕಾಸುರರಿಗೂ ಜಿಲ್ಲೆಯಲ್ಲಿ ಆಫೀಸ್!
– ಒಂದು ಪ್ರಶ್ನೆ ಪತ್ರಿಕೆ 10 ಲಕ್ಷಕ್ಕೆ ಮಾರಾಟ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನಡೆಸುವ ಪ್ರಥಮ ದರ್ಜೆ ಸಹಾಯಕ ಪರೀಕ್ಷೆಗಳ(ಎಫ್‌ಡಿಎ) ಪ್ರಶ್ನೆ ಪತ್ರಿಕೆಯನ್ನು 5 ಸಾವಿರ ಮಂದಿಗೆ ತಲುಪಿಸಲು ʼಲೀಕಾಸುರರುʼ ಪ್ಲಾನ್ ಮಾಡಿದ್ದ ವಿಚಾರ ಸಿಸಿಬಿ ಮೂಲಗಳಿಂದ ಪಬ್ಲಿಕ್ ಟಿವಿಗೆ ತಿಳಿದು ಬಂದಿದೆ.
ಹೌದು, ಈ ಪ್ರಕರಣದ ಹಿಂದೆ ಸದ್ಯಕ್ಕೆ 14 ಮಂದಿಯ ಬಂಧನವಾಗಿದೆ. ಈ ಆರೋಪಿಗಳು ಜಿಲ್ಲೆಗಳಲ್ಲೂ ತಮ್ಮ ಕಾರ್ಯಸ್ಥಾನ ಮಾಡಿಕೊಂಡು ಒಬ್ಬೊಬ್ಬರನ್ನು ನೇಮಕ ಮಾಡಿದ್ದರು. ಬೆಳಗಾವಿ, ರಾಯಚೂರು , ಮೈಸೂರು, ಯಾದಗಿರಿಯಲ್ಲಿ ವ್ಯಕ್ತಿಗಳನ್ನು ನೇಮಕ ಮಾಡಲಾಗಿತ್ತು.
Advertisement
ಬಂಧನಕ್ಕೆ ಒಳಗಾದ ವ್ಯಕ್ತಿಗಳ ಸಂಪರ್ಕದಲ್ಲಿ 500 ಮಂದಿಯ ಅಭ್ಯರ್ಥಿಗಳ ಲಿಂಕ್ ಇತ್ತು. ಒಟ್ಟು 5 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಪ್ರಶ್ನೆ ಪತ್ರಿಕೆಯನ್ನು ದಿನ ಬೆಳಗಾಗುವುದರ ಒಳಗಡೆ ಯಶಸ್ವಿಯಾಗಿ ತಲುಪಿಸಲು ಮೊದಲೇ ಪ್ಲಾನ್ ಸಿದ್ಧವಾಗಿತ್ತು. ಕೆಪಿಎಸ್‌ಸಿ 1,114 ಹುದ್ದೆಗಾಗಿ ಅರ್ಜಿ ಆಹ್ವಾನಿಸಿತ್ತು. ಆದರೆ ಪರೀಕ್ಷೆ ನಡೆಯುವ ಮೊದಲೇ 5 ಸಾವಿರ ಮಂದಿಗೆ ಪ್ರಶ್ನೆ ಪತ್ರಿಕೆ ತಲುಪಿಸಲು ಲೀಕಾಸುರರು ಮುಂದಾಗಿದ್ದರು. ಈ ಮೂಲಕ ಹಲವು ವರ್ಷಗಳಿಂದ ಎಫ್‌ಡಿಎ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದ ಸಾವಿರಾರು ಮಂದಿಯ ಕನಸಿಗೆ ಈ ಲೀಕಾಸುರರು ಕೊಳ್ಳಿ ಇಟ್ಟು ಭಗ್ನಗೊಳಿಸಿದ್ದಾರೆ.
Advertisement
Advertisement
ಪ್ಲಾನ್ ಏನಿತ್ತು? ಪ್ರತಿ ಪ್ರಶ್ನೆ ಪತ್ರಿಕೆಗೆ ಬಾರ್ ಕೋಡ್ ಇರುತ್ತದೆ. ಬಾರ್‌ಕೋಡ್ ಇರುವ ಪ್ರಶ್ನೆ ಪತ್ರಿಕೆಯನ್ನು ಬಂಡಲ್‌ನಿಂದ ತೆಗೆದರೆ ಗೊತ್ತಾಗಬಹುದು ಎಂಬ ಕಾರಣಕ್ಕೆ ಅದನ್ನು ತೆಗೆದಿಲ್ಲ. ಬದಲಾಗಿ ಒಟ್ಟು 36 ಪುಟಗಳ ಪ್ರಶ್ನೆ ಪತ್ರಿಕೆಯಲ್ಲಿ ಸಾಮಾನ್ಯ ಜ್ಞಾನ ಪತ್ರಿಕೆಯಿಂದ 86 ಪ್ರಶ್ನೆ,ಕನ್ನಡ ಪತ್ರಿಕೆಯಿಂದ 86 ಪ್ರಶ್ನೆ ಒಟ್ಟು 172 ಪ್ರಶ್ನೆಗಳನ್ನು ಸೋರಿಕೆ ಮಾಡಿ ಬಳಿಕ ಉತ್ತರಗಳನ್ನು ಸಿದ್ಧಮಾಡಿದ್ದರು.
Advertisement
ಮೋಹನ್ ನಾಪತ್ತೆ: ಕೆಪಿಎಸ್‌ಸಿಯ ಎಸ್‌ಡಿಎ ನೌಕರ ಮೋಹನ್ ಪ್ರಶ್ನೆ ಪತ್ರಿಕೆಯನ್ನು ಪ್ರಮುಖ ಪಾತ್ರವಹಿಸಿದ್ದಾನೆ ಎಂಬ ವಿಚಾರ ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ. ಈತ ಈಗಾಗಲೇ ಬಂಧನವಾಗಿರುವ ಕೋರಮಂಗಲದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಇನ್ಸ್‌ಪೆಕ್ಟರ್ ಚಂದ್ರಪ್ಪ, ಎಸ್‌ಡಿಎ ನೌಕರ ರಾಚಪ್ಪನ ಜೊತೆ ಸೇರಿ ಈ ಕೃತ್ಯ ಎಸಗಿದ್ದಾನೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ವಿಶೇಷ ಏನೆಂದರೆ ಮೋಹನ್ ಬೆಳಗಾವಿಯಲ್ಲಿ ಇಂದು ಎಫ್‌ಡಿಎ ಪರೀಕ್ಷೆ ಬರೆಯಬೇಕಿತ್ತು. ಆದರೆ ಚಂದ್ರಪ್ಪ, ರಾಚಪ್ಪ ಬಂಧನಕ್ಕೆ ಒಳಗಾದ ಸುದ್ದಿ ತಿಳಿದು ಮೋಹನ್ ಮೊಬೈಲ್ ಸ್ವಿಚ್ ಆಫ್ ಮಾಡಿ ಬೆಳಗಾವಿಯಿಂದಲೇ ಪರಾರಿಯಾಗಿದ್ದಾನೆ.
14 ಮಂದಿ ಬಂಧನ: ಸಿಸಿಬಿ ಪೊಲೀಸರು ಶನಿವಾರ ಈ ಪ್ರಕರಣದ ಸಂಬಂಧ 6 ಮಂದಿಯನ್ನು ಬಂಧಿಸಿದ್ದರು. ನಿನ್ನೆ ರಾತ್ರಿ ಮತ್ತು ಇಂದು ಒಟ್ಟು 8 ಮಂದಿಯನ್ನು ಬಂದಿಸಿದ್ದು, ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಈ ಪೈಕಿ ಹಲವು ಮಂದಿ ನಾಪತ್ತೆಯಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ. ಬಂಧಿತರಿಂದ ಒಟ್ಟು 36 ಲಕ್ಷ ರೂ. ನಗದು ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಬಂಧಿತರ ಪೈಕಿ ಕೆಲವರು ಅಭ್ಯರ್ಥಿಗಳಾಗಿರುವುದು ವಿಶೇಷ.
ನಕಲಿ ಚೆಕ್: ಆರೋಪಿಗಳು ಪ್ರಶ್ನೆ ಪತ್ರಿಕೆ ಮಾರಾಟಕ್ಕೆ 10 ಲಕ್ಷ ರೂ. ದರ ನಿಗದಿ ಮಾಡಿದ್ದರು. ಆರೋಪಿಗಳ ಪೈಕಿ ಹಣ ನೀಡಲು ಸಾಧ್ಯವಾಗದವರು ಖಾಲಿ ಚೆಕ್‌ಗಳನ್ನು ನೀಡಿದ್ದರು. ಈಗ ಖಾಲಿ ಚೆಕ್‌ಗಳನ್ನು ನೀಡಿದವರ ಪತ್ತೆಗೆ ಸಿಸಿಬಿ ಪೊಲೀಸರು ಮುಂದಾಗುತ್ತಿದ್ದಾರೆ.
ಎಫ್‌ಡಿಎ ಪರೀಕ್ಷೆಯ ಸಂಪೂರ್ಣ ಜವಾಬ್ದಾರಿ ಕೆಪಿಎಸ್‌ಸಿ ಮೇಲಿದೆ. ಪ್ರಶ್ನೆಪತ್ರಿಕೆ ಸಿದ್ಧಗೊಂಡು, ಪ್ರಿಂಟ್ ಮಾಡಿದ ಬಳಿಕ ಪರೀಕ್ಷೆಯ ಹಿಂದಿನ ದಿನ ಜಿಲ್ಲೆಗಳ ಖಜಾನೆಗೆ ಸಾಗಿಸಲಾಗುತ್ತದೆ. ಬಹಳ ರಹಸ್ಯವಾಗಿ ಇರಬೇಕಾದ ಪ್ರಶ್ನೆಗಳು ಆರೋಪಿಗಳಿಗೆ ಸಿಕ್ಕಿದ್ದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.