ಬೆಂಗಳೂರು: ಚಿರಂಜೀವಿ ಸರ್ಜಾ ಅವರಿಗೆ ಯಾವುದೇ ಕೆಟ್ಟ ಅಭ್ಯಾಸ ಇರಲಿಲ್ಲ. ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಸರ್ಜಾ ಕುಟುಂಬದ ಆಪ್ತ ಪ್ರಶಾಂತ್ ಸಂಬರ್ಗಿ ಮನವಿ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣ ಮತ್ತು ವಾಟ್ಸಪ್ ನಲ್ಲಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು, ಸ್ಲೀಪಿಂಗ್ ಮಾತ್ರೆಗಳನ್ನು ಸೇವಿಸುತ್ತಿದ್ದರು ಎಂದೆಲ್ಲ ಸುದ್ದಿಗಳು ಹರಿದಾಡುತ್ತಿದೆ. ಆದರೆ ಇದೆಲ್ಲ ಸುಳ್ಳು ಸುದ್ದಿಗಳಾಗಿದ್ದು ಇವುಗಳನ್ನು ನಂಬಬೇಡಿ ಎಂದು ಕೇಳಿಕೊಂಡಿದ್ದಾರೆ.
ಚಿರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ ಯಾವುದೇ ಕೆಟ್ಟ ಅಭ್ಯಾಸ ಇರಲಿಲ್ಲ. ಮೃತಪಟ್ಟ ಈ ಸಂದರ್ಭದಲ್ಲಿ ಈ ರೀತಿಯ ಸುದ್ದಿಗಳನ್ನು ದಯವಿಟ್ಟು ಹರಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಆಸ್ಪತ್ರೆ ಕೂಡ ವರದಿ ರಿಲೀಸ್ ಮಾಡಿದ್ದು, ಅರೆ ಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಮಧ್ಯಾಹ್ನ 2.20ಕ್ಕೆ ಆಸ್ಪತ್ರೆಗೆ ಕರೆಯಲಾಯಿತು. ತಕ್ಷಣವೇ ಎಮರ್ಜೆನ್ಸಿ ವಾರ್ಡ್‍ಗೆ ಶಿಫ್ಟ್ ಮಾಡಿ, ದೇಹದ ಉಷ್ಣಾಂಶ, ನಾಡಿಮಿಡಿತ, ಕಣ್ಣಿನ ತಪಾಸಣೆ ಮಾಡಿದಾಗ ಸ್ಪಂದನೆ ಇರಲಿಲ್ಲ. ಅತ್ಯಾಧುನಿಕ ತಂತ್ರಜ್ಞಾನ ಉಪಕರಣ ಬಳಸಿ ಎದೆಯೊತ್ತಿ ಉಸಿರು ನೀಡುವ ಸಿಪಿಆರ್ ಚಿಕಿತ್ಸೆ ಆರಂಭಿಸಲಾಯಿತು. 3.48ರವರೆಗೆ ಈ ಪ್ರಕ್ರಿಯೆ ನಡೆಯಿತು. ಮೂರು ಬಾರಿ ಸಿಪಿಆರ್ ಚಿಕಿತ್ಸೆಯಲ್ಲಿ ಯಶಸ್ವಿಯಾದರೂ ಬಳಿಕ ಸ್ಪಂದನೆ ಸಿಗಲಿಲ್ಲ. ಹಾಗಾಗಿ, 3.48ಕ್ಕೆ ಚಿರಂಜೀವಿ ಸರ್ಜಾ ನಿಧನರಾಗಿದ್ದಾರೆ ಎಂಬುದಾಗಿ ಪ್ರಕಟಿಸಲಾಯಿತು ಅಂತ ಅಪೋಲೋ ಆಸ್ಪತ್ರೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಒಟ್ಟು 22 ಚಿತ್ರಗಳಲ್ಲಿ ನಟಿಸಿದ್ದ ಚಿರುಗೆ ಕೇವಲ 39 ವರ್ಷವಾಗಿತ್ತು. ಹಠಾತ್ ಆಗಿ ಇಷ್ಟು ಚಿಕ್ಕ ವಯಸ್ಸಿಗೇ ನಿಧನರಾಗಿರೋದು ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ಚಿತ್ರರಂಗದ ಎಲ್ಲಾ ಹಿರಿಯ, ಕಿರಿಯ ಕಲಾವಿದರು ಆಸ್ಪತ್ರೆಗೆ ಭೇಟಿ ನೀಡಿ, ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದ್ರು. ಅಯ್ಯೋ.. ಇದೊಂದು ಅನ್ಯಾಯದ ಸಾವು, ಕ್ರೂರ ವಿಧಿಯಾಟ ಅಂತ ಹೃದಯ ಕಿತ್ತುಬರುವಂತೆ ಭಾವುಕರಾಗಿದ್ದಾರೆ. ಅದರಲ್ಲೂ 2 ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಪತ್ನಿ ಮೇಘನಾ ಇದೀಗ ಗರ್ಭಿಣಿಯಾಗಿದ್ದು ಎಲ್ಲರೂ ಮರುಕಪಟ್ಟಿದ್ದಾರೆ.
ಧ್ರುವಾ ಸರ್ಜಾ ಅವರ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಚಿರು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಅಂತ್ಯ ಸಂಸ್ಕಾರಕ್ಕೆ ಬರುವ ಕುಟುಂಬಸ್ಥರು ಹಾಗೂ ಗಣ್ಯರಿಗಾಗಿ ಪೆಂಡಲ್ ವ್ಯವಸ್ಥೆ ಮಾಡಲಾಗ್ತಿದೆ. ರಾಮನಗರ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ಬಂದೋಬಸ್ತ್ ಮಾಡುತ್ತಿದ್ದು, ನೆಲಗುಳಿ ಗ್ರಾಮದಲ್ಲಿ ವಾತಾವರಣ ಮಡುಗಟ್ಟಿದೆ.
ಜನವರಿ 19 ರಂದು ನಡೆದಿದ್ದ ಬೀಗರ ಔತಣಕೂಟದಲ್ಲಿ ಫಾರ್ಮ್ ಹೌಸ್ ಗೆ ಬಂದಿದ್ದರು. ನಮಗೆ ಬಹಳ ನೋವಾಗ್ತಿದೆ. ಚಿರಂಜೀವಿ ಅವರು ಬಹಳ ಒಳ್ಳೆಯ ಮನುಷ್ಯ. ಇಲ್ಲಿಯವರೆಗೆ ಮೂರು-ನಾಲ್ಕು ಬಾರಿ ಫಾರ್ಮ್ ಹೌಸ್ ಗೆ ಭೇಟಿ ನೀಡಿದ್ದರು. ಸರ್ಜಾ ಸರ್ ನಮ್ಮ ಗ್ರಾಮದಲ್ಲಿರುವ ದೇವಾಲಯಗಳ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು ಎಂದು ಗ್ರಾಮಸ್ಥರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.