ಚಿಕ್ಕಬಳ್ಳಾಪುರ: ಕೆಎಸ್‌ಆರ್‌ಟಿಸಿ ಬಸ್‍ಗಳನ್ನು ತಡೆದು ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ಮಾರ್ಗದ ಜಾತವಾರ ಬಳಿ ನಡೆದಿದೆ.
ಪ್ರತಿ ದಿನ ಶಾಲಾ ಕಾಲೇಜುಗಳಿಗೆ ತೆರಳಲು ನೂರಾರು ವಿದ್ಯಾರ್ಥಿಗಳು ಹಳ್ಳಿಗಳಿಂದ ಜಿಲ್ಲಾ ಕೇಂದ್ರಕ್ಕೆ ಬರಲು ಬಸ್‍ಗಳ ವ್ಯವಸ್ಥೆ ಇಲ್ಲ. ಶಾಲಾ-ಕಾಲೇಜುಗಳಿಗೆ ಹೋಗಲು ಹಳ್ಳಿ ಗಾಡಿನಿಂದ ಬೆಳಗ್ಗೆ ಮುಖ್ಯರಸ್ತೆಗೆ ನಡೆದುಕೊಂಡು ಬಂದರೂ ಇಲ್ಲಿಂದ ಸಕಾಲಕ್ಕೆ ನಮಗೆ ಬಸ್ ಸಿಗುತ್ತಿಲ್ಲ. ಬರುವ 2-3 ಬಸ್ಸುಗಳಲ್ಲಿ ವಿದ್ಯಾರ್ಥಿಗಳು ತುಂಬಿ ತುಳುಕುವಂತಾಗುತ್ತದೆ. ಹೀಗಾಗಿ ಸ್ಥಳಕ್ಕೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸುವಂತೆ ಪಟ್ಟು ಹಿಡಿದು 2-3 ಗಂಟೆಗಳ ಕಾಲ ಬಸ್‍ಗಳನ್ನ ತಡೆದು ಪ್ರತಿಭಟನೆ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹಾಗೂ ಚಿಕ್ಕಬಳ್ಳಾಪುರ ಗ್ರಾಮಾಂತರ ಪಿಎಸ್‍ಐ ನಾಳೆಯಿಂದ ಈ ಸಮಸ್ಯೆ ಎದುರಾಗದಂತೆ ಖುದ್ದು ನಾವೇ ನಾಳೆ ನಿಂತು ನಿಮಗೆ ಸಕಾಲಕ್ಕೆ ಸೂಕ್ತ ಬಸ್ ವ್ಯವಸ್ಥೆಯನ್ನು ಮಾಡಿಸುವುದಾಗಿ ಭರವಸೆ ನೀಡಿದರು. ನಂತರ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆ ವಾಪಸ್ ಪಡೆದರು.
ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಇದೇ ರೀತಿಯ ಸಮಸ್ಯೆಗಳು ಕಂಡು ಬರುತ್ತಿದ್ದು ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸುತ್ತಿದ್ದಾರೆ. ಅದರಲ್ಲೂ ಶಾಲಾ ಕಾಲೇಜು ವಿದ್ಯಾರ್ಥಿಗಳ ಅನೂಕೂಲಕ್ಕಾಗಿ ಬೆಳಗ್ಗಿನ ಹಾಗೂ ಸಂಜೆ ವೇಳೆ ಹೆಚ್ಚುವರಿ ಬಸ್‍ಗಳನ್ನ ಚಾಲನೆ ಮಾಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು.