ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್‌ಎಸ್ ಡ್ಯಾಂಗೆ ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರು ದೃಷ್ಟಿ ದೋಷ ಪೂಜೆ ಹಾಗೂ ಹೋಮ-ಹವನವನ್ನು ಮಾಡಿಸಿದ್ದಾರೆ.
Advertisement
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‌ಎಸ್ ಅಣೆಕಟ್ಟೆ ಕಳೆದ ಒಂದು ತಿಂಗಳಿನಿಂದ ವ್ಯಾಪಕ ಸುದ್ದಿಯಲ್ಲಿತ್ತು. ಸಂಸದೆ ಸುಮಲತಾ ಅಂಬರೀಶ್ ಗಣಿಗಾರಿಯಿಂದ ಕೆಆರ್‌ಎಸ್ ಅಣೆಕಟ್ಟೆ ಬಿರುಕು ಬಿಟ್ಟಿದೆ ಎಂದು ಹೇಳಿಕೆ ನೀಡುವ ಮೂಲಕ ಜೆಡಿಎಸ್ ನಾಯಕರು ಹಾಗೂ ಸುಮಲತಾ ಅವರ ನಡುವೆ ವಾಕ್ ಸಮರ ಏರ್ಪಟ್ಟಿತ್ತು. ಇದರ ಬೆನ್ನಲ್ಲೆ ಡ್ಯಾಂ ಪಕ್ಕದ ಮೆಟ್ಟಿಲಿನ ಗೋಡೆಯೂ ಸಹ ಕುಸಿದಿತ್ತು. ಈ ವೇಳೆ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಸುಮಲತಾ ಅವರ ಕಣ್ಣು ಡ್ಯಾಂ ಮೇಲೆ ಬಿದ್ದಿದೆ. ಹೀಗಾಗಿ ದೃಷ್ಟಿ ದೋಷ ಪೂಜೆ ಮಾಡಿಸಬೇಕು ಎಂದಿದ್ದರು.
Advertisement
Advertisement
ಈ ಹಿನ್ನೆಲೆ ಕೆಆರ್‌ಎಸ್ ಡ್ಯಾಂನ ಬಳಿ ಇರುವ ಕಾವೇರಿ ತಾಯಿ ಪ್ರತಿಮೆಯ ಮುಂಭಾಗ ಜ್ಯೋತಿಷಿ ಭಾನುಪ್ರಕಾಶ್ ಶರ್ಮ ಅವರ ನೇತೃತ್ವದಲ್ಲಿ ಜೆಡಿಎಸ್ ಶಾಸಕರು ದೃಷ್ಟಿ ದೋಷ ಪೂಜೆ ಹಾಗೂ ಹೋಮ-ಹವನವನ್ನು ಮಾಡಿಸಿದರು. ಪೂಜೆಯಲ್ಲಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಪುಟ್ಟರಾಜು, ಅನ್ನದಾನಿ, ಎಂ.ಶ್ರೀನಿವಾಸ್, ಸುರೇಶ್‍ಗೌಡ ಭಾಗಹಿಸಿದರು.
Advertisement
ಇದೇ ವೇಳೆ ದೃಷ್ಟಿ ದೋಷ ನಿವಾರಣೆ ಮಾಡಲು ಎಲ್ಲಾ ಶಾಸಕರು ಬೂದು ಕುಂಬಳಕಾಯಿಯಿಂದ ಡ್ಯಾಂ ದೃಷ್ಟಿ ತೆಗೆದು ಒಡೆದರು. ಬಳಿಕ ಡ್ಯಾಂನ ಮೂಲೆ ಮೂಲೆಗೂ ಬೂದು ಕುಂಬಳಕಾಯಿಯನ್ನು ಇಡಲಾಯಿತು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರುಗಳು, ಕೆಆರ್‍ಎಸ್ ಡ್ಯಾಂಗೆ ಒಳ್ಳೆಯದು ಆಗಬೇಕು ಎಂದು ಇಂದು ಪೂಜೆ ಹಾಗೂ ಹೋಮ-ಹವನವನ್ನು ಮಾಡಿಸಿದ್ದೇವೆ. ಕೆಲವರ ಕಣ್ಣು ಡ್ಯಾಂ ಮೇಲೆ ಬಿದ್ದಿದೆ. ಹೀಗಾಗಿ ದೃಷ್ಟಿಯನ್ನು ತೆಗೆಸಲಾಗಿದೆ. ಡ್ಯಾಂ ಆದಷ್ಟು ಬೇಗ ತುಂಬಲಿ ಎಂದು ಕಾವೇರಿ ತಾಯಿಯ ಬಳಿ ಪ್ರಾರ್ಥನೆ ಮಾಡಿದ್ದೇವೆ. ಹಾಗೂ ತಮಿಳುನಾಡಿನವರಿಗೆ ಒಳ್ಳೆಯ ಬುದ್ಧಿ ಕೊಟ್ಟು, ಮೇಕೆದಾಟು ಯೋಜನೆ ಆದಷ್ಟು ಬೇಗ ಪ್ರಾರಂಭವಾಗಲಿ ಎಂದು ತಾಯಿ ಬಳಿ ಪಾರ್ಥನೆ ಮಾಡಿದ್ದೇವೆ ಎಂದರು. ಇದನ್ನೂ ಓದಿ : ಇಂದು ಜೆಡಿಎಸ್ ಶಾಸಕರಿಂದ ಕೆಆರ್‌ಎಸ್ ಡ್ಯಾಂಗೆ ದೃಷ್ಟಿ ಪೂಜೆ