– ಅತೀ ಹೆಚ್ಚು ಬಾರಿ ಕಾವೇರಿ ತಾಯಿಗೆ ಬಾಗಿನ ನೀಡಿದ ಕೀರ್ತಿ ಸಿಎಂಗೆ
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯಕ್ಕೆ ಅತೀ ಹೆಚ್ಚು ಬಾರಿ ಬಾಗಿನ ಅರ್ಪಣೆ ಮಾಡಿರುವ ಕೀರ್ತಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಲಿದೆ.
ಹೀಗಾಗಲೇ ಕೆಆರ್‌ಎಸ್ ಜಲಾಶಯಕ್ಕೆ ನಾಲ್ಕು ಬಾರಿ ಬಾಗಿನ ಅರ್ಪಣೆ ಮಾಡಿರುವ ಯಡಿಯೂರಪ್ಪ ಅವರು, ಈ ಬಾರಿ ಕೆಆರ್‌ಎಸ್ ಜಲಾಶಯ ಭರ್ತಿಯಾಗಿರುವ ಹಿನ್ನೆಯಲ್ಲಿ ಇದೇ ತಿಂಗಳ 21ರಂದು ಕಾವೇರಿ ಮಾತೇಗೆ ಬಾಗಿನ ನೀಡಲಿದ್ದಾರೆ. ಈ ಮೂಲಕ ಯಡಿಯೂರಪ್ಪ ಅವರು ಕೆಆರ್‍ಎಸ್‍ಗೆ ಐದು ಬಾರಿ ಬಾಗಿನ ಅರ್ಪಣೆ ಮಾಡಿದ ರಾಜ್ಯದ ಏಕೈಕ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ತಾವು ಸಿಎಂ ಆಗಿದ್ದ ಅವಧಿಯಲ್ಲಿ ಗುಂಡುರಾವ್, ಬಂಗಾರಪ್ಪ ಹಾಗೂ ಕುಮಾರಸ್ವಾಮಿ ಅವರು ತಲಾ ಮೂರು ಬಾರಿ ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಿದ್ದರು. 2019 ಆಗಸ್ಟ್ ತಿಂಗಳಿನಲ್ಲಿ ಯಡಿಯೂರಪ್ಪ ಅವರು ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡುವ ಮೂಲಕ ಹೆಚ್ಚು ಬಾರಿ ಕಾವೇರಿ ಮಾತೇಗೆ ಬಾಗಿನ ಅರ್ಪಣೆ ಮಾಡಿದ ಸಿಎಂ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು. ಇದೀಗ ಇದೇ ತಿಂಗಳ 21 ರಂದು ಕೆಆರ್‌ಎಸ್‌ಗೆ ಬಾಗಿನ ಅರ್ಪಣೆ ಮಾಡುವ ಮೂಲಕ ಐದನೇ ಬಾರಿಗೆ ಬಾಗಿನ ಅರ್ಪಿಸಿದ ಸಿಎಂ ಎಂಬ ಮೆಚ್ಚುಗೆಗೆ ಪಾತ್ರರಾಗಲಿದ್ದಾರೆ.
124.80 ಅಡಿ ಗರಿಷ್ಠ ಮಟ್ಟ ಇರುವ ಕೆಆರ್‍ಎಸ್ ಜಲಾಶಯ ಸದ್ಯ 124.60 ಅಡಿಗಳಷ್ಟು ಭರ್ತಿಯಾಗಿದೆ. ಜಲಾಶಯಕ್ಕೆ 9,404 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 5,318 ಕ್ಯೂಸೆಕ್ ನೀರು ಹೊರ ಹೋಗುತ್ತಿದೆ.