– ದಿನದಿಂದ ದಿನಕ್ಕೆ ಬದಲಾಗ್ತಿದೆ ಬಣ್ಣ
– ಬಣ್ಣ ಬದಲಾಗಲು ಕಾರಣವೇನು?
ಮಾಸ್ಕೋ: ನದಿ ನೀರಿನ ಬಣ್ಣ ಕೆಂಪು ಬಣ್ಣಕ್ಕೆ ತಿರುಗಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿರುವ ಘಟನೆ ರಷ್ಯಾದಲ್ಲಿ ನಡೆದಿದೆ.
ನದಿಯ ನೀರಿನ ಬಣ್ಣ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಬೀಟ್ರೂಟ್ ನಂತೆ ಕೆಂಪು ಬಣ್ಣಕ್ಕೆ ತಿರುಗಿದೆ. ಇದ್ದಕ್ಕಿದ್ದಂತೆ ನೀರಿನ ಬಣ್ಣ ಬದಲಾಯಿಸಿಕೊಂಡಿರುವ ನದಿಗಳ ಪೈಕಿ ಇಸ್ಕಿಟಿಮ್ಕಾ ನದಿಯೂ ಒಂದಾಗಿದೆ. ನದಿಗೆ ಸೇರುವ ಮಾಲಿನ್ಯಕಾರಕದಿಂದ ಈ ಬದಲಾವಣೆಯಾಗಿದೆ ಎಂದು ಹೇಳಲಾಗುತ್ತಿದೆ.
ಇಂಡಸ್ಟ್ರಿಯಲ್ ನಗರವಾದ ಕೆಮೆರೋವೋದಲ್ಲಿ ನದಿ ನೀರಿನ ಬಣ್ಣ ಕೆಂಪು ಬಣ್ಣಕ್ಕೆ ತಿರುಗುತ್ತಿದ್ದಂತೆ ಸ್ಥಳೀಯರು ಗಾಬರಿಗೊಂಡಿದ್ದಾರೆ. ನೀರಿಗೆ ಕೆಲವು ಕೆಮಿಕಲ್ಸ್‍ಗಳು ಬಂದು ಸೇರುವುದರಿಂದ ನೀರಿನ ಬಣ್ಣ ಬದಲಾಗುತ್ತಿದೆ ಎನ್ನಲಾಗುತ್ತಿದೆ. ಆ ಪ್ರದೇಶದಲ್ಲಿ ಯಾವ ಜೀವಜಂತೂಗಳೂ ಕೂಡ ನೀರಿಗೆ ಇಳಿಯದಂತೆ ಅಲ್ಲಿನ ಜನರು ಎಚ್ಚರಿಕೆ ವಹಿಸುತ್ತಿದ್ದಾರೆ.
SCP-354 – Алое Озеро = Река Искитимка в Кемерово pic.twitter.com/X9OzZZRUN5
— Гейзер ???? (@zloy_geyzer) November 6, 2020
ಚರಂಡಿ ಬ್ಲಾಕ್ ಆಗಿದ್ದರಿಂದ ನೀರಿನ ಬಣ್ಣ ಬದಲಾಗಿದೆ. ನಾವು ಈ ಸಮಸ್ಯೆಯನ್ನು ಬಗೆಹರಿಸಲು ಕೆಲಸ ಮಾಡುತ್ತಿದ್ದೇವೆ. ಆದರೆ ಯಾವ ಕೆಮಿಕಲ್ ನಿಂದ ನೀರಿನ ಬಣ್ಣ ಬದಲಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ ಎಂದು ಕೆಮೆರೋವೋದ ಉಪ ಗವರ್ನರ್ ಆಂಡ್ರೇ ಪನೋವ್ ತಿಳಿಸಿದ್ದಾರೆ.
ರಷ್ಯಾದಲ್ಲಿ ಈ ಮೊದಲು ನರೋ – ಫೋಮಿನ್ಸ್ಕ್ ನದಿಗೆ ಕೆಮಿಕಲ್ ಸೇರಿ ಕೆಂಪು ಬಣ್ಣಕ್ಕೆ ತಿರುಗಿತ್ತು. ಈ ವರ್ಷದ ಆರಂಭದಲ್ಲಿ ಗ್ವೋಝ್ಡ್‍ನ್ಯಾ ನದಿಗೂ ಇದೇ ತರ ರಾಸಾಯನಿಕ ಸೇರಿ ನೀರು ಬೇರೆ ಬಣ್ಣಕ್ಕೆ ಬಂದಿತ್ತು. ಇದೀಗ ಇಸ್ಕಿಟಿಮ್ಕಾ ನದಿಯ ನೀರಿನ ಬಣ್ಣ ಬದಲಾಗುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಮಾಡಿದೆ.