– ಸರ್ಕಾರವನ್ನು ಮುಜುಗರಕ್ಕೀಡು ಮಾಡಲು ಗಣರಾಜ್ಯೋತ್ಸವದ ದಿನ ಆಯ್ಕೆ
– ಕೆಂಪು ಕೋಟೆ ಗಲಭೆಗೆ ನವೆಂಬರ್, ಡಿಸೆಂಬರ್ ನಲ್ಲೇ ಪಿತೂರಿ
– ಪ್ರತಿಭಟನೆಗಾಗಿಯೇ ಟ್ರ್ಯಾಕ್ಟರ್ ಖರೀದಿ
ನವದೆಹಲಿ: ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ ರೈತರ ಪ್ರತಿಭಟನೆ ವೇಳೆ ಗಣರಾಜ್ಯೋತ್ಸವದಂದು ನಡೆದ ಕೆಂಪು ಕೋಟೆ ಗಲಭೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಚಾರ್ಜ್‍ಶೀಟ್ ಸಲ್ಲಿಸಿದ್ದು, ಇದರಲ್ಲಿ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ.
ನವೆಂಬರ್, ಡಿಸೆಂಬರ್‍ನಲ್ಲೇ ಕೆಂಪು ಕೋಟೆ ಗಲಭೆಗೆ ಪಿತೂರಿ ರೂಪಿಸಲಾಗಿತ್ತು. ಸರ್ಕಾರಕ್ಕೆ ಮುಜುಗರಕ್ಕೀಡು ಮಾಡುವುದು ಗಣರಾಜ್ಯೋತ್ಸವ ದಿನದ ಆಯ್ಕೆಯ ಉದ್ದೇಶವಗಿತ್ತು. ಅಲ್ಲದೆ ಕೆಂಪು ಕೋಟೆ ಮೇಲೆ ಖಲಿಸ್ತಾನಿ ಧ್ವಜ ಹಾರಿಸಿದವರಿಗೆ ಭಾರೀ ಮೊತ್ತದ ಹಣ ನೀಡಲಾಗಿದೆ ಎಂಬ ವಿಚರಗಳು ಪೊಲೀಸರು ಸಲ್ಲಿಸಿದ ಚಾರ್ಜ್‍ನಿಂದ ಬಹಿರಂಗಗೊಂಡಿವೆ. ಅಲ್ಲದೆ ಕೆಂಪು ಕೋಟೆಯನ್ನು ವಶಪಡಿಸಿಕೊಂಡು, ಪ್ರತಿಭಟನೆಗೆ ಹೊಸ ತಾಣವನ್ನಾಗಿ ಮಾಡಿಕೊಳ್ಳುವ ಕುರಿತು ಪಿತೂರಿ ನಡೆದಿತ್ತು ಎಂದು ಸಹ ತಿಳಿದಿದೆ.
ಜನವರಿ 26ರ ಗಣರಾಜ್ಯೋತ್ಸವದಂದು ನಡೆದ ಗಲಭೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಜನರನ್ನು ಬಂಧಿಸಲಾಗಿದ್ದು, ಇದೀಗ ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ಹಲವು ಆಘಾತಕಾರಿ ಸತ್ಯಗಳನ್ನು ಬಹಿರಂಗಪಡಿಸಿದೆ. ಇದು ಯೋಜಿತ ಪಿತೂರಿಯ ಒಂದು ಭಾಗ, ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಲು ಕೆಂಪು ಕೋಟೆಯನ್ನು ಹೊಸ ತಾಣವನ್ನಾಗಿ ಮಾಡುವ ಪಿತೂರಿ ನಡೆದಿತ್ತು ಎಂದು ಚಾರ್ಜ್‍ಶೀಟ್‍ನಲ್ಲಿ ತಿಳಿಸಲಾಗಿದೆ.
ಈ ಯೋಜಿತ ಪಿತೂರಿಯನ್ನು ಸಫಲಗೊಳಿಸಲು ಅನೇಕ ವೃದ್ಧ ರೈತರನ್ನು ಸಹ ಸಜ್ಜುಗೊಳಿಸಲಾಗಿತ್ತು. ಸರ್ಕಾರವನ್ನು ಮುಜುಗರಕ್ಕೀಡು ಮಾಡಲು ಗಣರಾಜ್ಯೋತ್ಸವದ ದಿನವನ್ನು ಪ್ರತಿಭಟನಾ ದಿನವನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂಬ ಅಂಶ ಸಹ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖವಾಗಿದೆ. ಮಾತ್ರವಲ್ಲದೆ ಕೆಂಪು ಕೋಟೆ ಮೇಲೆ ತಮ್ಮ ಧ್ವಜ ಹಾರಿಸುವವರಿಗೆ ದೊಡ್ಡ ಮೊತ್ತದ ಹಣ ನೀಡುವ ಭರವಸೆ ನೀಡಲಾಗಿದೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಅಲ್ಲದೆ ಆರೋಪಿಯೊಬ್ಬರ ಮಗಳು ಮಾಡಿದ ಕರೆ ಚಾರ್ಜ್‍ಶೀಟ್‍ನ ಒಂದು ಭಾಗವಾಗಿದ್ದು, ಆಕೆಯ ತಂದೆಗೆ 50 ಲಕ್ಷ ರೂ. ನೀಡಿರುವುದಾಗಿ ಹೇಳಿದ್ದಾಳೆ.
ಚಾರ್ಜ್‍ಶೀಟ್‍ನ ಪ್ರಕಾರ, 2020ರ ನವೆಂಬರ್ ಹಾಗೂ ಡಿಸೆಂಬರ್‍ನಲ್ಲೇ ಪಿತೂರಿ ನಡೆಸಲಾಗಿದ್ದು, ಈ ಸಮಯದಲ್ಲಿ ಪಂಜಾಬ್ ಹಾಗೂ ಹರಿಯಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟ್ರ್ಯಾಕ್ಟರ್ ಖರೀದಿಸಲಾಗಿತ್ತು. ಪ್ರತಿಭಟನೆಗೂ ಮುಂಚಿತವಾಗಿ ಟ್ರ್ಯಾಕ್ಟರ್‍ಗಳನ್ನು ಖರೀದಿಸಿರುವುದು ಪಂಜಾಬ್‍ನಲ್ಲಿ ಭಾರೀ ಬೆಳವಣಿಗೆಯನ್ನು ಕಂಡಿದೆ ಎಂದು ಚಾರ್ಜ್‍ಶೀಟ್‍ನಲ್ಲಿ ತಿಳಿಸಲಾಗಿದೆ.
2020ರ ನವೆಂಬರ್‍ನಲ್ಲಿ ಟ್ರ್ಯಾಕ್ಟರ್ ಗಳ ಖರೀದಿ ಶೇ.43 ಹಾಗೂ ಡಿಸೆಂಬರ್‍ನಲ್ಲಿ ಶೇ.94ರಷ್ಟು ಹೆಚ್ಚಾಗಿದೆ. ಹರಿಯಾಣದಲ್ಲೂ ಮಸೂದೆಗಳನ್ನು ಪರಿಚಯಿಸಿದ ನಂತರ ಟ್ರ್ಯಾಕ್ಟರ್ ಗಳ ಖರೀದಿ ಹೆಚ್ಚಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಜನವರಿ 26ರ ಗಣರಾಜ್ಯೋತ್ಸವದಂದು ರೈತರ ಪ್ರತಿಭಟನೆ ತಾರಕಕ್ಕೇರಿತ್ತು. ಪೊಲೀಸರು ದೆಹಲಿ ಸುತ್ತುವರಿದು, ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಿದರೂ ರೈತರು ಬ್ಯಾರಿಕೇಡ್‍ಗಳನ್ನು ಕಿತ್ತುಹಾಕಿ ಕೆಂಪು ಕೋಟೆ ಪ್ರವೇಶಿಸಿ, ಕೋಟೆಯನ್ನು ಸಂಪೂರ್ಣ ಧ್ವಂಸ ಮಾಡಿದ್ದರು. ಅಲ್ಲದೆ ಕೆಂಪು ಕೋಟೆ ಮೇಲಿನ ರಾಷ್ಟ್ರಧ್ವಜ ಕಿತ್ತು ಹಾಕಿ, ಖಲಿಸ್ತಾನಿ ಧ್ವಜವನ್ನು ಹಾರಿಸಿದ್ದರು. ಪೊಲೀಸರು ಲಾಠಿ ಚಾರ್ಜ್, ಟಿಯರ್ ಗ್ಯಾಸ್ ಮೂಲಕ ಗಲಭೆ ನಿಯಂತ್ರಿಸಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಪೊಲೀಸರ ಮೇಲೆಯೇ ಕಲ್ಲುಗಳನ್ನು ತೂರಲಾಗಿತ್ತು.