ರಾಯಚೂರು: ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧೆಡೆ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ ಹೆಚ್ಚಳವಾಗಿದೆ.
ಜಿಲ್ಲೆಯ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಹೆಚ್ಚಾಗುತ್ತಿದೆ. ನಾರಾಯಣಪುರದ ಬಸವಸಾಗರ ಜಲಾಶಯದಿಂದ ನದಿಗೆ 2.60 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಜಲಾಶಯಕ್ಕೆ 2.20 ಲಕ್ಷ ಕ್ಯೂಸೆಕ್ ಒಳಹರಿವು ಇದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
Advertisement
Advertisement
ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಜಿಲ್ಲೆಯ ಎರಡು ಸೇತುವೆಗಳು ಮುಳುಗಡೆಯಾಗಿದ್ದು, ರಸ್ತೆ ಸಂಪರ್ಕ ಕಡಿತವಾಗಿದೆ. ಲಿಂಗಸಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಕಡದರಗಡ್ಡಿ, ಎಳಗುಂದಿ ಸೇರಿ ಎಂಟು ಗ್ರಾಮಗಳ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ದೇವದುರ್ಗ ತಾಲೂಕಿನ ಹೂವಿನ ಹೆಡಗಿ ಸೇತುವೆಯೂ ಮುಳುಗಡೆಯಾಗಿದ್ದು, ದೇವದುರ್ಗ-ಕಲಬುರ್ಗಿ ರಾಜ್ಯ ಹೆದ್ದಾರಿ ಮಾರ್ಗ ಕಡಿತವಾಗಿದೆ.
Advertisement
Advertisement
ಇನ್ನೂ ದೇವದುರ್ಗ ತಾಲೂಕಿನ ಕೊಪ್ಪರದ ಐತಿಹಾಸಿಕ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ಜಲಾವೃತವಾಗಿದೆ. ದೇವಾಲಯದ ಗರ್ಭಗುಡಿಯ ಮೆಟ್ಟಿಲುವರೆಗೆ ನೀರು ಬಂದಿದೆ. ಹೀಗಾಗಿ ಭಕ್ತರಿಗೆ ದೇವರ ದರ್ಶನ ಕಷ್ಟಸಾಧ್ಯವಾಗಿದೆ. ಒಟ್ಟು 33.333 ಟಿಎಂಸಿ ಸಾಮರ್ಥ್ಯದ ಬಸವಸಾಗರ ಜಲಾಶಯದಲ್ಲಿ ಈಗ 26.23 ಟಿಎಂಸಿ ನೀರು ಸಂಗ್ರಹವಿದೆ. ಒಳಹರಿವು ಹೆಚ್ಚಾದಂತೆ ನದಿಗೆ ಹೆಚ್ಚಿನ ಪ್ರಮಾಣದ ನೀರನ್ನ ಹರಿಸಲಾಗುತ್ತಿದೆ. ಜೊತೆಗೆ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ಜನ ಆತಂಕದಲ್ಲಿದ್ದಾರೆ.