– ಶಾಶ್ವತ ಪರಿಹಾರಕ್ಕೆ ಒತ್ತಾಯ
ರಾಯಚೂರು: ಕೃಷ್ಣೆ ಪ್ರವಾಹದಿಂದ ಜಿಲ್ಲೆಯ ನಡುಗಡ್ಡೆ ಗ್ರಾಮಗಳು ಮತ್ತೆ ಆತಂಕದಲ್ಲಿ ಮುಳುಗಿವೆ. ಶಾಶ್ವತ ಪರಿಹಾರ ಸಿಗದೇ ಗ್ರಾಮಸ್ಥರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಸುರಿದ ಜೋರು ಮಳೆಯಿಂದ ನಾರಾಯಣಪುರ ಜಲಾಶಯ ಭರ್ತಿಯಾಗಿ ರಾಯಚೂರಿನಲ್ಲಿ ಪ್ರವಾಹ ಭೀತಿ ತಂದಿದೆ. ಈಗಾಗಲೇ ಲಿಂಗಸುಗೂರಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಸುಮಾರು 8 ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ದೇವದುರ್ಗದ ಹೂವಿನಹೆಡಗಿ ಸೇತುವೆ ಮುಳುಗಡೆ ಹಂತ ತಲುಪಿದೆ. ಹೀಗಾಗಿ ದೇವದುರ್ಗ ಕಲಬುರ್ಗಿಗೆ ಸಂಪರ್ಕ ಕಲ್ಪಿಸುವ ಮಾರ್ಗದ ಹೆದ್ದಾರಿಯ ಸೇತುವೆ ಮೇಲೆ ವಾಹನಗಳ ಓಡಾಟ ನಿರ್ಬಂಧಿಸಲಾಗಿದೆ.
Advertisement
Advertisement
ರಾಯಚೂರಿನ ಒಟ್ಟು ಆರು ಪ್ರದೇಶಗಳು ಈಗಾಗಲೇ ನಡುಗಡ್ಡೆಗಳಾಗಿದ್ದು, ಅಲ್ಲಿನ ಸಾವಿರಾರು ಜನ ಹೊರಗಿನ ಸಂಪರ್ಕವನ್ನ ಕಳೆದುಕೊಂಡಿದ್ದಾರೆ. ಲಿಂಗಸುಗೂರಿನ ಓಂಕಾರಗಡ್ಡಿ, ಹಾಲಗಡ್ಡಿ, ಕರಕಲಗಡ್ಡಿಗಳಲ್ಲಿ ಒಟ್ಟು 14 ಕುಟುಂಬಗಳಿದ್ದು, 104 ಜನ ವಾಸವಾಗಿದ್ದಾರೆ. ರಾಯಚೂರಿನ ಕುರ್ವಕುಲ, ಅಗ್ರಹಾರ, ಕುರ್ವಾಕುರ್ದ ನಡುಗಡ್ಡೆಗಳಲ್ಲಿ 298 ಕುಟುಂಬಗಳಿದ್ದು, 945 ಜನ ವಾಸವಾಗಿದ್ದಾರೆ. ಇವರೆಲ್ಲಾ ನಡುಗಡ್ಡೆಯಲ್ಲೆ ಜಮೀನು ಹೊಂದಿದ್ದು, ತಮ್ಮ ಜೀವನ ನಡೆಸುತ್ತಿದ್ದರು.
Advertisement
Advertisement
ಇವರು ಪ್ರವಾಹ ಬಂದಾಗಲೆಲ್ಲಾ ಸಂಕಷ್ಟಕ್ಕೆ ಒಳಗಾಗುತ್ತಲೇ ಇದ್ದಾರೆ. ಕುರ್ವಕುಲಾ ಹಾಗೂ ಕುರ್ವಕುರ್ದಾಗಳಿಗೆ ಪ್ರತ್ಯೇಕ ಎರಡು ಸೇತುವೆಗಳ ಕಾಮಗಾರಿ ನಿಂತು ದಶಕವಾದರೂ ಪುನರಾರಂಭವಾಗಿಲ್ಲ. ಸರ್ಕಾರ ಶಾಶ್ವತ ಪರಿಹಾರ ನೀಡಬೇಕು ಅಂತ ನಡುಗಡ್ಡೆಗಳ ನಿವಾಸಿಗಳು ಮನವಿ ಮಾಡುತ್ತಲೇ ಇದ್ದಾರೆ. ಆದರೆ ಸರ್ಕಾರ ಕೇವಲ ಪ್ರವಾಹ ಸಂದರ್ಭದಲ್ಲಿ ಮಾತ್ರ ಇಲ್ಲಿನ ಜನರನ್ನ ಸಂಪರ್ಕಿಸುತ್ತಿವೆ ಅಂತ ಆರೋಪಿಸಿದ್ದಾರೆ.
ಅಗತ್ಯ ವಸ್ತು, ಅನಾರೋಗ್ಯ ಕಾರಣಕ್ಕೆ ಈಗಲೂ ನಡುಗಡ್ಡೆಗಳ ಜನ ಅರಗೋಲು ಅವಲಂಭಿಸಿದ್ದಾರೆ. ನದಿಯಲ್ಲಿನ ನೀರಿನ ಸೆಳೆತಕ್ಕೂ ಹೆದರದೆ ಪ್ರಾಣವನ್ನೇ ಪಣವಿಟ್ಟು ಕೃಷ್ಣೆಯನ್ನ ದಾಟಿ ಬಂದು ವಾಪಸ್ ನಡುಗಡ್ಡೆಗಳಿಗೆ ಮರಳುತ್ತಿದ್ದಾರೆ. ಮಕ್ಕಳು, ಗರ್ಭಿಣಿಯರನ್ನೂ ಸಹ ಅರಗೋಲಿನಲ್ಲೇ ಕರೆದುಕೊಂಡು ಬರುತ್ತಿದ್ದಾರೆ.
ಕಳೆದ ವರ್ಷ ಆರು ಲಕ್ಷ ಕ್ಯೂಸೆಕ್‍ಗೂ ಅಧಿಕ ಪ್ರಮಾಣದ ನೀರನ್ನ ಕೃಷ್ಣ ನದಿಗೆ ಹರಿಸಲಾಗಿತ್ತು. ಆಗ ಹೆಲಿಕ್ಯಾಪ್ಟರ್ ಮೂಲಕ ಅಲ್ಲಿನ ಜನರನ್ನ ಸ್ಥಳಾಂತರಿಸಬೇಕಾಯಿತು. ಈಗಲೂ ಕೃಷ್ಣ ನದಿ ಪ್ರವಾಹ ಹೆಚ್ಚಾಗುವ ಸಾಧ್ಯತೆಗಳಿವೆ. ಆದರೆ ನಡುಗಡ್ಡೆಯ ಜನ ಹೊರಬರಲು ಮಾತ್ರ ಸಿದ್ಧರಿಲ್ಲ. ಅಧಿಕಾರಿಗಳು ಕೇವಲ ಅಕ್ಕಿ ಕೊಡಲು ಬರುತ್ತಾರೆ. ನಮಗೆ ಶಾಸ್ವತ ಪರಿಹಾರ ನೀಡಲ್ಲ ಅನ್ನೋದು ಅವರ ಆರೋಪ. ಮಳೆಯ ಪ್ರಮಾಣ ತಗ್ಗದಿದ್ದರೆ ಈ ಬಾರಿಯೂ ನಡುಗಡ್ಡೆ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.