ಯಾದಗಿರಿ: ತುತ್ತು ಅನ್ನಕ್ಕಾಗಿ ಊರಿಂದ ಊರಿಗೆ ದುಡಿಯಲು ಹೋದ ಅಮಾಯಕ ಜೀವಗಳನ್ನು ಜವರಾಯ ಬಲಿ ಪಡೆದುಕೊಂಡಿದ್ದಾನೆ. ಟಂಟಂ ಮತ್ತು ಟ್ಯಾಂಕರ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಎಂ ಕೊಳ್ಳೂರು ಬಳಿ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಅಯ್ಯಮ್ಮ (60), ಶರಣಮ್ಮ (40), ಕಾಸೀಂಬೀ (40), ಭೀಮಬಾಯಿ (40), ದೇವಿಂದ್ರಮ್ಮ (70) ಎಂಬವರು ಸ್ಥಳದಲ್ಲಿ ಪ್ರಾಣ ಬಿಟ್ಟಿದ್ದು, ಇನ್ನೂ ಐವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮೃತರೆಲ್ಲರೂ ವಡಗೇರಾ ತಾಲೂಕಿನ ಮುನಮುಟಗಿ ಗ್ರಾಮಸ್ಥರಾಗಿದ್ದು, ಟಂಟಂ ವಾಹನದಲ್ಲಿ ಜಮೀನಿಗೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು. ಅಪಘಾತ ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.