ಮಡಿಕೇರಿ: ಸಂಬಂಧಿಯ ಮುಖವನ್ನು ಕೊನೆಯ ಬಾರಿಗೆ ನೋಡಬೇಕೆಂದು ಅಂತ್ಯ ಸಂಸ್ಕಾರಕ್ಕೆ ಹೋಗಿದ್ದ 25 ಜನರಿಗೆ ಕೋವಿಡ್ ಸೋಂಕು ಬಂದಿರುವ ಘಟನೆ ಕೊಡಗಿನ ಕುಶಾಲನಗರದಲ್ಲಿ ನಡೆದಿದೆ.
ಅಚ್ಚರಿ ಎಂದರೆ ಮೃತ ಮಹಿಳೆಗೆ ಕೋವಿಡ್ ಇರಲಿಲ್ಲ. ಬೇರೆ ಅನಾರೋಗ್ಯದ ಕಾರಣದಿಂದ ಮೃತಪಟ್ಟಿದ್ದರು. ಆದರೆ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದ 25 ಮಂದಿಗೆ ಸೋಂಕು ಮೃತ ಮಹಿಳೆಯ ಮಗಳಿಂದ ಬಂದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಕುಶಾಲನಗರದ ಗೋಪಾಲ್ ಸರ್ಕಲ್‍ನ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ಮೃತಪಟ್ಟಿದ್ದರು. ಆ ಮಹಿಳೆಯ ಶವವನ್ನು ತಂದು ಕುಶಾಲನಗರದಲ್ಲಿ ಸಂಸ್ಕಾರ ಮಾಡಲಾಗಿತ್ತು. ಮೃತಪಟ್ಟ ಮಹಿಳೆಯ ಮಗಳಿಗೆ ಕೋವಿಡ್ ಇತ್ತು. ಆಕೆಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಮೃತಪಟ್ಟ ಮಹಿಳೆಯ ಶವವನ್ನು ಕುಶಾಲನಗರಕ್ಕೆ ತಂದು ಸಂಸ್ಕಾರ ಮಾಡುವಾಗ ಆಕೆಯ ಮಗಳು ಸಂಸ್ಕಾರದಲ್ಲಿ ಎಲ್ಲರಂತೆ ಭಾಗವಹಿಸಿದ್ದರು. ಹಾಗಾಗಿ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದ 25 ಜನರಿಗೆ ಕೋವಿಡ್ ಹರಡುವುದಕ್ಕೆ ಇದೇ ಮೂಲ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಕೋವಿಡ್ ಇರುವ ಆಕೆಯನ್ನು ಎಲ್ಲರಿಂದ ಪ್ರತ್ಯೇಕ ಇರುವಂತೆ ಆರೋಗ್ಯ ಇಲಾಖೆ ಕ್ರಮ ವಹಿಸಿದ್ದರೆ ಅಥವಾ ಕೋವಿಡ್ ಬಂದ ಆಕೆಯನ್ನು ನಿತ್ಯ ಫಾಲೋವಪ್ ಮಾಡಿದ್ದರೆ ಇಂದು ಕೊಡಗಿನಲ್ಲಿ ಇಪ್ಪತ್ತೈದು ಜನರಿಗೆ ಕೋವಿಡ್ ಸೋಂಕು ಹರಡುತ್ತಿರಲಿಲ್ಲ. ಆದರೆ ಆರೋಗ್ಯ ಇಲಾಖೆ ಮಾತ್ರ ಬೆಂಗಳೂರಿನಿಂದ ಮೃತದೇಹವನ್ನು ತಂದು ಯಾರಿಂದಲೋ ಹರಡಿರಬಹುದು ಎಂದು ಹೇಳುತ್ತಿದೆ. ಇದೊಂದೇ ಘಟನೆಯಲ್ಲ ಇಂತಹ ನಾಲ್ಕೈದು ಪ್ರಕರಣಗಳಿಂದಾಗಿ ಕೊಡಗಿನಲ್ಲಿ ಕೋವಿಡ್ ವೇಗವಾಗಿ ಹರಡುತ್ತಿದೆ.
ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪ್ರತಿಕ್ರಿಯಿಸಿ, ಸೋಂಕು ಇರುವುದು ದೃಢಪಡುತ್ತಿದ್ದಂತೆ ಅವರಿಗೆ ಸೀಲ್ ಹಾಕಬೇಕು. ಮನೆಯ ಸುತ್ತಮುತ್ತಲಿನವರಿಗೆ ಪರೀಕ್ಷೆ ಮಾಡಬೇಕು. ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕೂಡಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕು. ಕೊಡಗಿನ ಎಲ್ಲಾ ಪ್ರವಾಸಿ ತಾಣಗಳನ್ನು ಸಂಪೂರ್ಣ ಬಂದ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.