– ಮಗನ ಸಾವಿನ ಬಗ್ಗೆ ಹೆತ್ತವರ ಅನುಮಾನ
– ನ್ಯಾಯಕ್ಕಾಗಿ ಟ್ವೀಟರ್ ಅಭಿಯಾನ
ಶಿವಮೊಗ್ಗ : ಕುವೈತ್‍ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಯವಕನ ಶವವನ್ನು ಹುಟ್ಟೂರು ಸಾಗರ ತಾಲೂಕಿನ ಚೂರಿಕಟ್ಟೆ ಗ್ರಾಮಕ್ಕೆ ತರಲಾಗಿದೆ.
ಹಾಶಮ್ ಫರೀದ್ ಸಾಬ್ (28) ಕುವೈತ್‍ನಲ್ಲಿ ಕೆಲಸ ಮಾಡುತ್ತಿದ್ದಾಗ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರು. ಮೃತದೇಹ ಹುಟ್ಟೂರಿಗೆ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
Advertisement
Advertisement
ಮೃತ ಹಾಶಮ್ ಫರೀದ್ ಸಾಬ್ ಕುವೈತ್‍ನ ಖಾಸಗಿ ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಕುವೈತ್‍ನಲ್ಲಿ ಕೆಲಸ ಮಾಡಿಕೊಂಡಿದ್ದ ಫರೀದ್ ವಾರದಲ್ಲಿ ಎರಡು ಮೂರು ದಿನಕ್ಕೊಮ್ಮೆ ಕುಟುಂಬಸ್ಥರಿಗೆ ದೂರವಾಣಿ ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದರು. ಆದರೆ ಮೂರ್ನಾಲ್ಕು ದಿನವಾದರೂ ಹಾಶಮ್ ಫೋನ್ ಮಾಡದಿದ್ದರಿಂದ ಕುಟುಂಬಸ್ಥರು ಅವರ ಮೊಬೈಲ್‍ಗೆ ಫೋನ್ ಮಾಡಿದ್ದಾರೆ. ಆದರೆ ಹಾಶಮ್ ಮೊಬೈಲ್ ಫೋನ್‍ಗೆ ಕರೆ ಹೋಗಿಲ್ಲ.
Advertisement
Advertisement
ಹಾಶಮ್ ಕುಟುಂಬಸ್ಥರು ಆತ ಕೆಲಸ ಮಾಡುತ್ತಿದ್ದ ಕಂಪನಿಯ ಅಧಿಕಾರಿಗೆ ಕರೆ ಮಾಡಿದ್ದಾರೆ. ಈ ವೇಳೆ ಕರೆ ಸ್ವೀಕರಿಸಿದ ಅಧಿಕಾರಿ ನಿಮ್ಮ ಮಗ ಡಿ.25 ರಂದು ಸಮುದ್ರದಲ್ಲಿ ಈಜುತ್ತಿದ್ದಾಗ ಮೃತಪಟ್ಟಿದ್ದಾರೆ ಎಂದು ತಿಳಿಸಿ ಫೋನ್ ಕಟ್ ಮಾಡಿದ್ದಾರೆ. ಹಾಶಮ್ ಮೃತಪಟ್ಟು ಎರಡು ದಿನವಾದರೂ ಆತನ ಕುಟುಂಬಸ್ಥರಿಗೆ ತಿಳಿಸುವ ಪ್ರಯತ್ನ ಮಾಡಿಲ್ಲ. ಇದರಿಂದ ಅನುಮಾನಗೊಂಡ ಹಾಶಮ್ ಮನೆಯವರು ಆತನ ಸ್ನೇಹಿತರಿಗೆ ಕರೆ ಮಾಡಿ ಆತ ಉಳಿದುಕೊಂಡಿದ್ದ ಕೊಠಡಿ ಬಳಿ ಹೋಗಿ ನೋಡುವಂತೆ ತಿಳಿಸಿದ್ದಾರೆ. ಕೊಠಡಿಗೆ ಹೋಗಿ ಗಮನಿಸಿದ ಹಾಶಮ್ ಸ್ನೇಹಿತರು ಆತ ಮಲಗಿದ್ದ ಹಾಸಿಗೆ ಮೇಲೆ ರಕ್ತದ ಕಲೆ ಆಗಿರುವುದಾಗಿ ಹಾಶಮ್ ಕುಟುಂಬದವರಿಗೆ ತಿಳಿಸಿದ್ದಾರೆ.
ತನ್ನ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕುಟುಂಬಸ್ಥರು ಈ ಬಗ್ಗೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮ್ಮ ಮಗನ ಸಾವಿನ ಬಗ್ಗೆ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ. ಮೃತ ಯುವಕನ ಸಾವು ಸಹಜ ಸಾವೋ ಅಥವಾ ಕೊಲೆಯೋ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.