ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷಾ ಶುಲ್ಕ ಭರಿಸಲು ನೀಡಲಾಗಿದ್ದ ಕೊನೆಯ ದಿನಾಂಕವನ್ನು ಜುಲೈ 07ರ ವರೆಗೆ ವಿಸ್ತರಿಸಲಾಗಿದೆ.
ವಿವಿಯ ಎಲ್ಲ ಸ್ನಾತಕೋತ್ತರ ಪದವಿ ಪರೀಕ್ಷೆಗಳಿಗೆ ಶುಲ್ಕ ಭರಿಸಲು ಈ ಹಿಂದೆ ಜೂನ್ 23ರಂದು ಕೊನೆಯ ದಿನಾಂಕ ನಿಗಧಿ ಮಾಡಲಾಗಿತ್ತು. ಕೋವಿಡ್-19ನ ಸಂಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಯಾವುದೇ ವಿಳಂಬ ಶುಲ್ಕವಿಲ್ಲದೆ ಪರೀಕ್ಷಾ ಶುಲ್ಕ ಭರಿಸಲು ಜುಲೈ 07ರ ವರೆಗೆ ಕಾಲಾವಕಾಶ ನೀಡಲಾಗಿದೆ.
Advertisement
ಇನ್ನುಳಿದಂತೆ ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎಂ., ಬಿ.ಬಿ.ಎ., ಬಿ.ಟಿ.ಎ., ಬಿ.ಸಿ.ಎ., ಬಿ.ಎಸ್.ಡಬ್ಲ್ಯೂ., ಬಿ.ಎಸ್ಸಿ. (ಆನರ್ಸ್), ಬಿ.ಎಡ್., ಹಾಗೂ ಬಿ.ಪಿ.ಎಡ್. ಸ್ನಾತಕ ಪದವಿಗಳ ಪರೀಕ್ಷೆಗೆ ಶುಲ್ಕ ಭರಿಸಲು ಈಗಾಗಲೇ ಅವಧಿ ಮುಕ್ತಾಯವಾಗಿದ್ದು, ಇದುವರೆವಿಗೂ ಶುಲ್ಕ ಪಾವತಿಸದ ವಿದ್ಯಾರ್ಥಿಗಳು ಕೂಡ ಜುಲೈ 07 ರವರೆಗೆ ಪರೀಕ್ಷಾ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ. ಎಂ.ವೆಂಕಟೇಶ್ವರಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement
Advertisement
ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯು.ಜಿ.ಸಿ.)ದ ನಿಬಂಧನೆಗಳಿಗೆ ಒಳಪಟ್ಟು ಪರೀಕ್ಷಾ ಶುಲ್ಕ ಪಾವತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಯಾವುದೇ ವಿದ್ಯಾರ್ಥಿಗೆ ಪರೀಕ್ಷಾ ಶುಲ್ಕ ಭರಿಸಲು ತಾಂತ್ರಿಕ ಅಥವಾ ಇನ್ನಿತರೆ ಸಮಸ್ಯೆಗಳಿದ್ದಲ್ಲಿ ವಿವಿಯ ಪರೀಕ್ಷಾಂಗ ಕುಲಸಚಿವರ ಅನುಮತಿಯ ಮೇರೆಗೆ ಪರೀಕ್ಷಾ ಶುಲ್ಕ ಪಾವತಿಸಬಹುದು ಎಂದು ತಿಳಿಸಿದ್ದಾರೆ.
Advertisement
ಪರೀಕ್ಷೆಗಳನ್ನು ನಡೆಸಲು ವಿಶ್ವವಿದ್ಯಾಲಯ ಸಂಪೂರ್ಣ ಸನ್ನದ್ಧವಾಗಿದೆ. ಸರ್ಕಾರದ ಸೂಚನೆ ಬಂದ ಬಳಿಕ ವಿದ್ಯಾರ್ಥಿಗಳಿಗೆ ಸೂಕ್ತ ಕಾಲಾವಕಾಶ ನೀಡಿ ಪರೀಕ್ಷೆಗಳನ್ನು ನಡೆಸಲಾಗುವುದು. ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಎಂದಾದರೂ ಪಾವತಿಸಲೇಬೇಕು. ಈ ವಿಷಯದಲ್ಲಿ ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.