– ಅಧಿಕಾರದಲ್ಲಿರುವ ಈಶ್ವರಪ್ಪ ಯಾರ ವಿರುದ್ದ ಹೋರಾಟ ಮಾಡುತ್ತಿದ್ದಾರೆ
– ಹಾಲುಮತ ಉತ್ಸವದಲ್ಲಿ ಸಿದ್ದರಾಮಯ್ಯ ಬಿಜೆಪಿ ವಿರುದ್ದ ಕಿಡಿ
ರಾಯಚೂರು: ಕುರುಬರಿಗೆ ಎಸ್ಟಿ ಮೀಸಲಾತಿ ನೀಡುವುದಕ್ಕೆ ನಾನು ವಿರೋಧಿಸುತ್ತಿಲ್ಲ, ಆದರೆ ಈಗಿನ ಎಸ್ಟಿ ಮೀಸಲಾತಿ ಹೋರಾಟದಲ್ಲಿ ರಾಜಕೀಯ ಇದೆ. ಇದರ ಹಿಂದೆ ಆರ್‌ಎಸ್‌ಎಸ್ ಇದೆ ಈ ಕಾರಣಕ್ಕೆ ನಾನು ವಿರೋಧಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.
ಜಿಲ್ಲೆಯ ದೇವದುರ್ಗದ ವೀರಗೋಟದಲ್ಲಿ ಆಯೋಜಿಸಲಾಗಿರುವ ಹಾಲುಮತ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಿದ್ದರಾಮಯ್ಯ ಎಸ್‍ಟಿ ಗಾಗಿ ನಡೆದಿರುವ ಈಗಿನ ಹೋರಾಟ ಯಾರ ವಿರುದ್ಧ ಈಶ್ವರ ವರ್ಸಸ್ ಈಶ್ವರಪ್ಪನಾ? ಈಶ್ವರಪ್ಪ ವರ್ಸಸ್ ಯಡಿಯೂರಪ್ಪನಾ? ಅವರದೇ ಸರ್ಕಾರ ಕೇಂದ್ರ ಹಾಗೂ ರಾಜ್ಯದಲ್ಲಿದೆ. ಯಾಕೆ ಒತ್ತಡ ಹೇರಿ ಮೀಸಲಾತಿ ಕೊಡಿಸಬಾರದು. ನಾನು ಸಿಎಂ ಇದ್ದಾಗ ನಾಲ್ಕು ಜಿಲ್ಲೆಗಳಲ್ಲಿ ಕುರಬರಿಗೆ ಎಸ್ಟಿ ಮೀಸಲಾತಿ ನೀಡಿದ್ದೇನೆ. ಕುಲಶಾಸ್ತ್ರ ಅಧ್ಯಯನಕ್ಕೆ ಒಂದು ವರ್ಷವಾಯಿತು ಯಾಕೆ ಪೂರ್ಣಗೊಳ್ಳುತ್ತಿಲ್ಲ. ಕುರುಬ ಸಮಾಜವನ್ನು ಒಡೆಯುವ ಪ್ರಯತ್ನ ನಡೆದಿದೆ ಆದರೆ ಅದು ಆಗುವುದಿಲ್ಲ. ಕುರುಬ ಸಮಾಜದ ಮುಖಂಡರಾಗಲು ಈಶ್ವರಪ್ಪ ಹೊರಟಿದ್ದಾರೆ ಅಂತ ಸಿದ್ದರಾಮಯ್ಯ ಈಶ್ವರಪ್ಪ ವಿರುದ್ಧ ಗುಡುಗಿದರು.
ಅಧಿಕಾರ ಇರಲಿ ಇರದೇ ಹೋಗಲಿ, ನಾನು ಯಾವತ್ತೂ ಸಾಮಾಜಿಕ ನ್ಯಾಯದ ಪರ ಇರುತ್ತೇನೆ. ನಾನು ಹುಬ್ಬಳ್ಳಿಯಲ್ಲಿ ಅಹಿಂದ ಮಾಡಿದಾಗ ದೇವೇಗೌಡರು ಬೇಡ ಎಂದು ಹೇಳಿದ್ದರು ಮಂತ್ರಿ ಸ್ಥಾನ ಕಳೆದುಕೊಳ್ಳುತ್ತೀಯ ಅಂತಾ ಹೇಳಿದ್ದರು. ಆದ್ರೂ ನಾನು ಜನರಿಗಾಗಿ ಅಹಿಂದ ಸಮಾವೇಶ ಮಾಡಿದೆ. ಆಗ ನನ್ನನ್ನು ಪಕ್ಷದಿಂದ ಹೊರಗೆ ಹಾಕಿದರು. ಕೊನೆತನಕ ನಾನು ಸ್ವಾಭಿಮಾನದಿಂದಲೇ ಬದುಕುತ್ತೇನೆ. ಎಲ್ಲಿಯವರೆಗೆ ನಿಮ್ಮ ರಕ್ಷಣೆ ಇರುತ್ತೋ ಅಲ್ಲಿಯವೆಗೆ ಯಾರೂ ನನ್ನ ಏನೂ ಮಾಡುವುದಕ್ಕೆ ಆಗುವುದಿಲ್ಲ. ಡಾ ರಾಜಕುಮಾರ್ ಹೇಳಿದಂತೆ ನೀವೇ ನನ್ನ ದೇವರು ಎಂದು ಸಿದ್ದರಾಮಯ್ಯ ಹೇಳಿದರು ಅಭಿಮಾನಿಗಳ ಮನಗೆದ್ದರು.
ಕಳೆದ 16 ವರ್ಷದಿಂದ ನಡೆಯುತ್ತಿರುವ ಹಾಲುಮತ ಉತ್ಸವ ಈ ಬಾರಿಯೂ ಜೋರಾಗಿ ನಡೆಯುತ್ತಿದೆ. ವೀರಗೋಟದಲ್ಲಿ ಕನಕಗುರುಪೀಠದ ಶ್ರೀಸಿದ್ದರಾಮಾನಂದ ಸ್ವಾಮಿಗಳ ನೇತ್ರತ್ವದಲ್ಲಿ ಉತ್ಸವ ನಡೆಯುತ್ತಿದೆ. ಉತ್ಸವದಲ್ಲಿ ಹೆಳವ, ಕಾಡುಸಿದ್ದ, ಟಗರುಜೋಗಿ, ಸಮಾವೇಶ ಆಯೋಜಿಸಲಾಗಿದೆ. ಬೀದರಿನ ಮಲ್ಲಿಕಾರ್ಜುನ ಹಿರಿವಗ್ಗಯ್ಯರಿಂದ ಹಾಲುಮತ ಧ್ವಜಾರೋಹಣ, ಪಲ್ಲಕ್ಕಿ ಮೆರವಣಿಗೆ ನಡೆಯಿತು. ಬುಡಕಟ್ಟು ಜನಾಂಗದ ಮುಖಂಡರು ಭಾಗಿ ಉತ್ಸವದಲ್ಲಿ ಭಾಗಿಯಾಗಿದ್ದಾರೆ. ಮೂರು ದಿನಗಳ ಕಾಲ ಉತ್ಸವ ನಡೆಯಲಿದ್ದು ಸಾವಿರಾರು ಜನ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.