ಗದಗ: ಕುರಿಗಳ ಕಳ್ಳತನ ಕೃತ್ಯಕ್ಕೆ ಮುಂದಾದ ಯುವಕರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಸಖತ್ ಗೂಸಾ ನೀಡಿರುವ ಘಟನೆ ತಾಲೂಕಿನ ಅಸುಂಡಿ ಗ್ರಾಮದಲ್ಲಿ ನಡೆದಿದೆ.
ಕಳ್ಳತನದ ವೇಳೆ ಸಿಕ್ಕಿಬಿದ್ದ ಇಬ್ಬರು ಕಳ್ಳರನ್ನು ಅರೆಬೆತ್ತಲೆಗೊಳಿಸಿ ಸ್ಥಳಿಯರು ಹಿಗ್ಗಾಮುಗ್ಗ ಥಳಿಸಿದ್ದಾರೆ. ನಾಲ್ಕು ಜನ ಸೇರಿಕೊಂಡು ಕುರಿ ಕಳ್ಳತನ ಮಾಡ್ತಿದ್ದರು. ಈ ಖದೀಮರು ಗದಗನ ಸೆಟಲ್ಮೆಂಟ್ ನಿವಾಸಿಗಳು ಎನ್ನಲಾಗುತ್ತಿದ್ದು, ಈ ಕೃತ್ಯಕ್ಕೆ ಅಣ್ಣಿಗೇರಿ ಕುರಿಕಾಯುವ ಓರ್ವ ಬಾಲಕನನ್ನು ಬಳಸಿಕೊಂಡಿದ್ದರು. ಇಬ್ಬರು ಬಾಲಕರು ಸೇರಿದಂತೆ ಒಟ್ಟು ನಾಲ್ಕು ಜನ ಕಳ್ಳರ ಗ್ಯಾಂಗ್ ಅನೇಕ ದಿನಗಳಿಂದ ಅಸುಂಡಿ, ಮಲ್ಲಸಮುದ್ರ, ಬಿಂಕದಕಟ್ಟಿ, ಕುರ್ತಕೋಟಿ ಹೀಗೆ ಅನೇಕ ಕಡೆಗಳಲ್ಲಿ ಕುರಿಗಳನ್ನು ಕಳ್ಳತನ ಮಾಡುತ್ತಿದ್ದರು.
Advertisement
Advertisement
ಕಳ್ಳತನ ಮಾಡಿದ ಕುರಿಗಳನ್ನು ಗದಗದಿಂದ ಹೊರರಾಜ್ಯದ ಕೊಲ್ಲಾಪುರ ಹಾಗೂ ಸೊಲ್ಲಾಪುರಕ್ಕೆ ಮಾರಾಟ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಇವರ ಚಲನ-ವಲನ ಅನುಮಾನಗೊಂಡ ಕುರಿಗಾಹಿಗಳು, ಮರದ ಮೇಲೆ ಏರಿ ಕುಳಿತು ಖದೀಮರು ಕುರಿಗಳನ್ನು ಕದಿಯುವುದನ್ನು ನೋಡಿದ್ದಾರೆ. ಬಳಿಕ ಕಳ್ಳರನ್ನು ಹಿಡಿದು ಥಳಿಸಿ, ಗ್ರಾಮೀಣ ಪೊಲೀಸರಿಗೆ ಒಪ್ಪಿಸಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಕರೆ ತಂದು ವಿಚಾರಣೆಗೆ ಒಳಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.