ತುಮಕೂರು: ಕೊರೊನಾ ಶಂಕಿತ ವ್ಯಕ್ತಿಗಳನ್ನು ಇದುವರೆಗೂ ಕ್ವಾರಂಟೈನ್ ಮಾಡಲಾಗುತ್ತಿತ್ತು. ಇದೀಗ ಕುರಿಗಳಿಗೂ ಕೂಡ ಕ್ವಾರಂಟೈನ್ ಮಾಡಿ ಜೊತೆಗೆ ಅವುಗಳ ಸ್ವಾಬ್ ಮಾದರಿ ಸಹ ಪಡೆಯಲಾಗಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದಲ್ಲಿ 50 ಕುರಿಗಳನ್ನು ಒಂದೆಡೆ ಕೂಡಿ ಹಾಕಲಾಗಿದೆ. ಕುರಿಗಳಿಗೆ ಮೇಯಲು ಹೊರಗಡೆ ಬಿಡದಂತೆ ನಿರ್ಧರಿಸಲಾಗಿದೆ. ಕಾರಣ ಈ ಕುರಿಗಳನ್ನು ಮೇಯಿಸುತ್ತಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಈಗಾಗಲೇ ಸೋಂಕಿತ ಕುರಿಗಾಹಿಯನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಈತ ಕಾಯುತ್ತಿದ್ದ ಕುರಿಗಳಲ್ಲಿ ಕೊರೊನಾ ವೈರಸ್ ವಿಭಿನ್ನ ಸ್ವರೂಪದಲ್ಲಿ ಇರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾಡಳಿತ ಕುರಿಗಾಹಿಯ 40 ಕ್ಕೂ ಹೆಚ್ಚು ಕುರಿಗಳ ಸ್ವಾಬ್ ಸಂಗ್ರಹಿಸಿದೆ. ಪಶುಸಂಗೋಪನ ಇಲಾಖೆ ಡಿಡಿ ಡಾ. ನಂದೀಶ್ ಅವರ ಮುಂದಾಳತ್ವದಲ್ಲಿ ಮುಂಜಾಗ್ರತಾ ಕ್ರಮವಾಗಿ ಕುರಿಗಳ ಸ್ವ್ಯಾಬ್ ತೆಗೆದು ಪರೀಕ್ಷೆಗಾಗಿ ಮಧ್ಯಪ್ರದೇಶದ ಭೋಪಾಲ್‍ನಲ್ಲಿರುವ ಲ್ಯಾಬ್‍ಗೆ ಕಳುಹಿಸಲಾಗಿದೆ.
ಈ ನಡುವೆ ಚಿಕ್ಕನಾಯಕನಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಕುರಿ ಮಾಂಸವನ್ನು ಜನರು ಸೇವಿಸುವ ಮುನ್ನ ಪರೀಕ್ಷಿಸಿಕೊಳ್ಳಬೇಕು. ನಂತರವೇ ಅದನ್ನು ಬಳಸಬೇಕು ಎಂದು ಸೂಚಿಸಲಾಗಿದೆ. ಸಾಮಾನ್ಯವಾಗಿ ಕುರಿಗಳ ಮೂಲಕ ಕೊರೊನಾ ಸೋಂಕು ಹರಡುವುದಿಲ್ಲ ಎಂಬ ವಿಶ್ವಾಸವಿದೆ. ಆದರೂ ಕೂಡ ಮುಂಜಾಗೃತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕುರಿಗಳ ಸ್ವ್ಯಾಬ್ ಸ್ಯಾಂಪಲ್ ಗಳ ವರದಿ ಬಂದ ನಂತರವೇ ಕುರಿಗಳನ್ನು ಮೇಯಲು ಗುಂಪಿನಲ್ಲಿ ಬಿಡಬೇಕು ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.