– ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಸಿ ಎಚ್ಚರಿಕೆಯ ಘಂಟೆ ಭಾರಿಸ್ಬೇಕು
– ಜೆಡಿಎಸ್ ನನ್ನ ಪ್ರಕಾರ ಪಕ್ಷವೇ ಅಲ್ಲ
ಬೆಂಗಳೂರು: ಎರಡು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದ ಬಳಿಕ ರಾಜ್ಯದಲ್ಲಿ ರಾಜಕೀಯ ಗರಿಗೆದರಿದೆ. ಜೊತೆಗೆ ಬೈ ಎಲೆಕ್ಷನ್ ಜಯಗಳಿಸಲು ಮೂರು ಪಕ್ಷಗಳು ತಮ್ಮದೇ ಆದ ಪ್ಲಾನ್ ಮಾಡಿಕೊಂಡು ಕಣಕ್ಕಿಳಿಯುತ್ತಿವೆ.
ಉಪಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಪಕ್ಷದ ನಾಯಕರು ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿದರು. ಜೊತೆಗೆ ಈ ಸಭೆಯಲ್ಲಿ ಶಿರಾ ಕ್ಷೇತ್ರದ ನೂರಾರು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್‍ಗೆ ಸೇರ್ಪಡೆಯಾದರು. ಈ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಡಳಿತ ಪಕ್ಷ ಮತ್ತು ಜೆಡಿಎಸ್ ಪಕ್ಷದ ಮೇಲೆ ಕಿಡಿಕಾರಿದರು.
ಮೊನ್ನೆ ಯಾಕೋ ಕುಮಾರಸ್ವಾಮಿ ಶಿರಾಗೆ ಬಂದು ಅಳ್ತಾ ಇದ್ನಪ್ಪ. ವಿಷ ಕೊಡಿ ಮತ್ತೊಂದು ಕೊಡಿ ಅಂತಿದ್ದ. ಇದೇನು ಹೊಸತಲ್ಲ ದೇವೇಗೌಡರ ಕಾಲದಿಂದಲೂ ಹೀಗೆ ನಡೆದುಕೊಂಡು ಬಂದಿದೆ. ಕಮಾರಸ್ವಾಮಿ ಅದನ್ನು ಮುಂದುವರಿಸಿದ್ದಾರೆ ಅಷ್ಟೇ. ನನ್ನ ಪ್ರಕಾರ ಜೆಡಿಎಸ್ ಒಂದು ಪಕ್ಷವೇ ಅಲ್ಲ. ರಾಜಕೀಯದಲ್ಲಿ ಜನ ಸೇವೆ ಮಾಡಬೇಕು. ಅದನ್ನು ಬಿಟ್ಟು ವಿಷ ಕೊಡಿ ಎಂಬುದು ರಾಜಕಾರಣನಾ? ಜನರೇ ಆಶೀರ್ವಾದ ಮಾಡಬೇಕು. ನಾವೇ ಕೇಳಿಕೊಳ್ಳಬಾರದು ಎಂದು ಹೆಚ್‍ಡಿಕೆಗೆ ಸಿದ್ದು ಟಾಂಗ್ ನೀಡಿದರು.
ಇದೇ ವೇಳೆ ಆಡಳಿತ ಪಕ್ಷದ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲ. ಒಂದೂ ರೂಪಾಯಿ ಸಹಾ ಅಭಿವೃದ್ಧಿಗೆ ನೀಡುತ್ತಿಲ್ಲ. ಜನ ಸರ್ಕಾರಕ್ಕೆ ಎಚ್ಚರಿಕೆಯ ಘಂಟೆ ಹೊಡಿಬೇಕು. ಹಾಗೆ ಘಂಟೆ ಹೊಡಿಬೇಕಾದರೆ ಜನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು. ಈ ಹಿಂದೆ ನಮ್ಮ ಶಾಸಕರನ್ನ 20-25 ಕೋಟಿ ಕೊಟ್ಟು ಖರೀದಿ ಮಾಡಿ ಸರ್ಕಾರ ರಚನೆ ಮಾಡಿದರು ಎಂದು ದೂರಿದರು.
ಇದು 10% ಕಮಿಷನ್ ಸರ್ಕಾರ. ನಾನು ಹೆಸರು ಹೇಳಲ್ಲ ಇದೇ ಸರ್ಕಾರದ ಒಬ್ಬ ಸಚಿವ ಹೇಳುತ್ತಾನೆ ಸರ್ ಗುತ್ತಿಗೆ ಕಾಮಗಾರಿ ಸ್ಯಾಂಕ್ಷನ್ ಆಗಬೇಕು ಅಂದ್ರೆ 10% ಕಮಿಷನ್ ಕೊಡಲೇಬೇಕು. ನಮ್ಮ ಕ್ಷೇತ್ರದ ಗುತ್ತಿಗೆದಾರ ಒಬ್ಬ 10 ಲಕ್ಷ ಕೊಟ್ಟು ಕೆಲಸ ಮಾಡಿಕೊಂಡು ಬಂದಿದ್ದಾನೆ ಎಂದು ಸಚಿವನೇ ಹೇಳುತ್ತಾನೆ. ಸಚಿವನಿಗೆ ಹೀಗಾದ್ರೆ ಶಾಸಕರ ಪರಿಸ್ಥಿತಿ ಏನು? ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಕಳೆದ ಒಂದು ವರ್ಷದಲ್ಲಿ ವಿಪರೀತ ಸಾಲ ಮಾಡಿದ್ದಾರೆ. ಹೀಗಾಗಿ ರಾಜ್ಯ ಮತ್ತು ದೇಶಕ್ಕೆ ಕಾಂಗ್ರೆಸ್ ಅನಿವಾರ್ಯ ಎಂದು ಸಿದ್ದರಾಮಯ್ಯ ತಿಳಿಸಿದರು.
ಜೆಡಿಎಸ್ ಅವರು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಕ್ಷೇತ್ರದಲ್ಲಿ ಎಚ್ಚರಿಕೆಯಿಂದ ಇರಬೇಕು. ಆ ಗಿರಾಕಿಗಳು ಯಾವಾಗ ಬೇಕಿದ್ದರೂ ಮೈತ್ರಿ ಮಾಡಿಕೊಳ್ಳುತ್ತಾರೆ. ನಮ್ಮಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಇದ್ದವು. ಈ ಹಿಂದೆ ತುಮಕೂರಿನಲ್ಲಿ ಜಯಚಂದ್ರ, ಪರಮೇಶ್ವರ್ ಮತ್ತು ರಾಜಣ್ಣ ನಡುವೆ ಸಣ್ಣಪುಟ್ಟ ವ್ಯತ್ಯಾಸಗಳು ಇತ್ತು. ಇದೆಲ್ಲ ಬಗೆಹರಿಸಿಕೊಂಡು ಈಗ ಒಂದಾಗಿ ಚುನಾವಣೆ ಮಾಡುತ್ತಿದ್ದಾರೆ. ಹಾಗಾಗಿ ಈ ಬಾರಿ ಜಯಚಂದ್ರನನ್ನು ಗೆಲ್ಲಿಸಿ ಕಳಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು.
ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಒಂದೂವರೆ ವರ್ಷದಿಂದ ಶಾಸಕನಿಲ್ಲ. ಸಮ್ಮಿಶ್ರ ಸರ್ಕಾರ ಬೀಳಿಸಲು ಮುನಿರತ್ನ ಸಹ ಕಾರಣ. ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲೂ ಮುಖಂಡರು ಉತ್ಸಾಹ ತೋರುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಜೆಡಿಎಸ್ ನವರು ಯಾವತ್ತು ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರಲ್ಲ. ಅವರು ಬೇರೆಯವರ ಹೆಗಲ ಮೇಲೆ ಕುಳಿತು ಆಡಳಿತ ನಡೆಸುವವರು ಎಂದು ಸಿದ್ದರಾಮಯ್ಯ ಗುಡುಗಿದರು.
ಕಳೆದ ಬಾರಿ ಟಿಬಿ ಜಯಚಂದ್ರ ಒಳ್ಳೆಯ ಕೆಲಸ ಮಾಡಿದ್ದ ಆದರೂ ನೀವು ಆತನನ್ನು ಸೋಲಿದ್ರಿ. ನಾನು ಕೂಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತೆ. ಜೆಡಿಎಸ್‍ನವರು ಭಾವನಾತ್ಮಕವಾಗಿ ವೋಟ್ ಕೇಳುತ್ತಾರೆ. ಈ ಬಾರಿಯ ಚುನಾವಣೆಯಲ್ಲಿ ನಮಗೂ ಬಿಜೆಪಿಗೂ ನೇರಾ ಪೈಪೋಟಿ. ಜೆಡಿಎಸ್ ಈ ಬಾರಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ವ್ಯಂಗ್ಯವಾಡಿದರು.