‘ಕುದುರೆಗಳು ಹೊರ ಬಂದ ನಂತರವಷ್ಟೇ ನಾವು ಎಚ್ಚೆತ್ತುಕೊಳ್ಳುವುದೇ’ – ಪಕ್ಷದ ಬಗ್ಗೆ ಸಿಬಲ್‌ ಆತಂಕ

Public TV
2 Min Read
kapil sibal

ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ, ವಕೀಲ ಕಪಿಲ್‌ ಸಿಬಲ್‌ ಮೊದಲ ಬಾರಿಗೆ ಬಹಿರಂಗವಾಗಿ ಪಕ್ಷದ ನಡೆಯ ಬಗ್ಗೆ ಪ್ರಶ್ನಿಸಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ರಾಜಸ್ಥಾನ ಸರ್ಕಾರದಲ್ಲಿನ ಭಿನ್ನಮತದ ಬಗ್ಗೆ ಕಪಿಲ್ ಸಿಬಲ್‌ ಬೇಸರದ ಟ್ವೀಟ್ ಮಾಡಿದ್ದಾರೆ. ನಮ್ಮ ಪಕ್ಷದ ಬಗ್ಗೆ ನನಗೆ ಆತಂಕವಾಗುತ್ತಿದೆ. ನಮ್ಮ ಲಾಯಗಳಿಂದ(ಕುದುರೆಗಳನ್ನು ಕಟ್ಟಿ ಹಾಕುವ ಜಾಗ) ಕುದುರೆಗಳು ಹೊರ ಬಂದ ನಂತರ ನಾವು ಎಚ್ಚೆತ್ತುಕೊಳ್ಳುವುದೇ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಶಾಸಕರ ಖರೀದಿಗೆ ಕುದುರೆ ವ್ಯಾಪಾರ ನಡೆಸಿ ಸರ್ಕಾರ ಉರುಳಿಸಲು ಮುಂದಾಗಿದ್ದಾರೆ ಎಂಬ ಆರೋಪದ ಮೇರೆಗೆ ಇಬ್ಬರು ವ್ಯಕ್ತಿಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಪಡೆಯು (ಎಸ್‌ಒಜಿ) ಪ್ರಕರಣ ದಾಖಲಿಸಿ ಬಂಧಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುವಂತೆ ಪೊಲೀಸರು ಸಚಿನ್ ಪೈಲಟ್‌ಗೆ ನೋಟಿಸ್‌ ಕಳುಹಿಸಿದ್ದರು.

ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ. ಕಾಂಗ್ರೆಸ್‌ ಶಾಸಕರನ್ನು ಖರೀದಿಸಲು ಬಿಜೆಪಿ 25 ಕೋಟಿ ನೀಡುವ ಆಮಿಷ ಒಡ್ಡಿದೆ ಎಂದು ಹೇಳಿದ್ದಾರೆ.

2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಗಳಿಸಿದ ಬಳಿಕ 69 ವರ್ಷದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು 42 ವರ್ಷದ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್‌ ನಡುವೆ ಭಿನ್ನಮತ ಎದ್ದಿತ್ತು. ಆಗ ಹೇಗೂ ಕಾಂಗ್ರೆಸ್‌ ಹೈಕಮಾಂಡ್‌ ಭಿನ್ನಮತವನ್ನು ಶಮನ ಮಾಡಲು ಸಚಿನ್ ಪೈಲಟ್‌ಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಿ ಸಮಾಧಾನ ಮಾಡಿತ್ತು. ಆದರೆ ಈಗ ಭಿನ್ನಮತ ಮತ್ತಷ್ಟು ಉಲ್ಬಣಗೊಂಡಿದ್ದು ಪೈಲಟ್‌ ಅವರು ತಮ್ಮ ಆಪ್ತ 25 ಶಾಸಕರ ಜೊತೆ ಹೈಕಮಾಂಡ್‌ ಭೇಟಿಯಾಗಲು ದೆಹಲಿಗೆ ಬಂದಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಹೈಡ್ರಾಮಾ – 25 ಶಾಸಕರ ಜೊತೆ ದೆಹಲಿ ತಲುಪಿದ ಪೈಲಟ್‌

ಒಟ್ಟು 200 ವಿಧಾನ ಸಭಾ ಕ್ಷೇತ್ರಗಳ ಪೈಕಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಏಕಾಂಗಿಯಾಗಿ 100 ಕ್ಷೇತ್ರಗಳನ್ನು ಗೆದ್ದಿದ್ದರೆ ಬಿಜೆಪಿ 72 ಸ್ಥಾನವನ್ನು ಗೆದ್ದಿತ್ತು. ಬಳಿಕ ಬಿಎಸ್‌‌ಪಿಯ 6 ಮಂದಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. 13 ಮಂದಿ ಪಕ್ಷೇತರ ಶಾಸಕರ ಪೈಕಿ 12 ಮಂದಿ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಿದ್ದಾರೆ. ಇತ್ತ ಬಿಜೆಪಿ ಬಳಿ 72 ಶಾಸಕರು ಇದ್ದಾರೆ. ಬಿಜೆಪಿಗೆ ಆರ್‌ಎಲ್‌ಪಿಯ ಒಬ್ಬರು ಮತ್ತು ಪಕ್ಷೇತರ ಶಾಸಕರು ಬೆಂಬಲ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *