– ಭಯದಿಂದಲೇ ಕುಣಿಯಲ್ಲಿಳಿದ ಮಹಿಳಾ ಲ್ಯಾಬ್ ಟೆಕ್ನಿಷಿಯನ್
ಹಾವೇರಿ: ಮಹಿಳಾ ಲ್ಯಾಬ್ ಟೆಕ್ನಿಷಿಯನ್‍ಯೊಬ್ಬರು ಕುಣಿಯಲ್ಲಿ ಕೂರಿಸಿದ್ದ ಮೃತದೇಹದಿಂದ ಗಂಟಲು ದ್ರವ ಸಂಗ್ರಹಿಸಿದ ಘಟನೆ ಸವಣೂರು ತಾಲೂಕಿನ ಹಿರೇಮುಗದೂರು ಗ್ರಾಮದಲ್ಲಿ ನಡೆದಿದೆ.
ಹಿರೇಮುಗದೂರು ಗ್ರಾಮದ ವ್ಯಕ್ತಿಯೊಬ್ಬರು ಮೇ 10ರಂದು ಮೃತಪಟ್ಟಿದ್ದರು. ಈ ಕುರಿತು ಸವಣೂರು ತಾಲೂಕು ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಲ್ಯಾಬ್ ಟೆಕ್ನಿಷಿಯನ್ ಶೋಭಾ ಅವರಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ತಕ್ಷಣವೇ ಹಿರೇಮುಗದೂರು ಗ್ರಾಮದ ಹೋಗಿದ್ದರು. ಆದರೆ ಅವರು ಹೋಗುವಷ್ಟರಲ್ಲಿ ಮೃತದೇಹವನ್ನ ಸಂಬಂಧಿಕರು ಧಪನ್ ಮಾಡಲು ಕುಣಿಯಲ್ಲಿ ಕೂರಿಸಿದ್ದರು.
ಲ್ಯಾಬ್ ಟೆಕ್ನಿಷಿಯನ್ ಶೋಭಾ ಅವರು ಭಯದಿಂದಲೇ ಕುಣಿಯಲ್ಲಿಳಿದು ಮೃತದೇಹದ ಗಂಟಲು ದ್ರವ ಕಲೆಕ್ಟ್ ಮಾಡಿದ್ದಾರೆ. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದ್ದ ಅವರು ಪಿಪಿಇ ಕಿಟ್ ಧರಿಸಿ ಕುಣಿಯಲ್ಲಿ ಇಳಿದಿದ್ದರು.
ಸವಣೂರು ಪಟ್ಟಣದ ಇಬ್ಬರಲ್ಲಿ ಕೊರೊನಾ ಕೇಸ್ ದೃಢಪಟ್ಟಿದ್ದರಿಂದ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಲಾಗಿತ್ತು. ಹೀಗಾಗಿ ಲ್ಯಾಬ್ ಟೆಕ್ನಿಷಿಯನ್ ಶೋಭಾ ಸ್ಮಶಾನಕ್ಕೆ ತೆರಳಿ ಮೃತದೇಹದ ಸ್ವ್ಯಾಬ್ ಕಲೆಕ್ಟ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ತಾಲೂಕಿನ ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಲ್ಯಾಬ್ ಟೆಕ್ನಿಷಿಯನ್‍ಗಳಿಗೆ ಇಲಾಖೆಯಿಂದ ಗಂಟಲು ದ್ರವ ಮಾಡುವ ತರಬೇತಿ ನೀಡಲಾಗಿರುತ್ತದೆ. ಆದರೂ ಸ್ಮಶಾನಕ್ಕೆ ಹೋಗಿ ಕುಣಿಯಲ್ಲಿಳಿದು ಸ್ವ್ಯಾಬ್ ಕಲೆಕ್ಟ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಅಧಿಕಾರಿಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯತನಕ್ಕೆ ಸಾಕ್ಷಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.