ಬೆಂಗಳೂರು: ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ (Rural Drinking Water Project) ಕಾಮಗಾರಿಗಳನ್ನ ಗುತ್ತಿಗೆ ಪಡೆದು ಕೆಲ ವರ್ಷಗಳಾದರೂ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು, ಗ್ರಾಮೀಣ ನೀರು ಸರಬರಾಜು ಇಲಾಖೆಯ ಜಿಲ್ಲಾ ಕಾರ್ಯನಿರ್ವಾಹಕ ಎಂಜಿನಿಯರುಗಳಿಗೆ ಸೂಚನೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಗ್ರಾಮೀಣ ನೀರು ಸರಬರಾಜು ಇಲಾಖೆಯ (Rural Water Supply Department) ಜಿಲ್ಲಾ ಕಾರ್ಯನಿರ್ವಾಹಕ ಎಂಜಿನಿಯರುಗಳ ಸಭೆಯಲ್ಲಿ ಮಾತನಾಡಿದ ಸಚಿವರು, ಎಂಜನಿಯರರು ನಿಧಾನ ಪ್ರವೃತ್ತಿಯನ್ನ ಬಿಟ್ಟು, ಗ್ರಾಮೀಣ ಜನರಿಗೆ ಕುಡಿಯುವ ನೀರು ಒದಗಿಸುವ ಯೋಜನೆಗಳನ್ನು ನಿರ್ದಿಷ್ಟ ಸಮಯದಲ್ಲಿ ಅನುಷ್ಠಾನಕ್ಕೆ ತರುವಲ್ಲಿ ಆದ್ಯತೆ ನೀಡಬೇಕೆಂದು ಆದೇಶಿಸಿದರು. ಇದನ್ನೂ ಓದಿ: ಸಿಎಂ ಬದಲಾವಣೆಗೆ ಸಿದ್ದರಾಮಯ್ಯ ಮೈಂಡ್ ಸೆಟ್ ಆಗಿದೆ: ಕೇಂದ್ರ ಸಚಿವ ಸೋಮಣ್ಣ ವ್ಯಂಗ್ಯ
ಏಕಗ್ರಾಮ ಹಾಗೂ ಬಹುಗ್ರಾಮ ನೀರು ಸರಬರಾಜು ಯೋಜನೆಯ ಕಾಮಗಾರಿಗಳು ಮುಕ್ತಾಯಗೊಂಡ ನಂತರ ಅಗೆದ ರಸ್ತೆಗಳನ್ನು ಯಥಾಸ್ಥಿತಿಗೆ ತರುತ್ತಿಲ್ಲವೆಂಬ ದೂರುಗಳು ಬಹಳಷ್ಟು ಬರುತ್ತಿದೆ. ಈ ಸಂಬಂಧ ಎಂಜನಿಯರುಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ ಸಚಿವರು, ನೀರು ಸರಬರಾಜು ಕಾಮಗಾರಿ ಮುಗಿದ ನಂತರ ಆದ್ಯತೆಯ ಮೇಲೆ ರಸ್ತೆಗಳನ್ನು ಸರಿಪಡಿಸುವಲ್ಲಿ ಗಮನ ಹರಿಸಲು ಸೂಚಿಸಿದರು. ಜೊತೆಗೆ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡುವ ಮೊದಲು ಅವರಲ್ಲಿನ ಯಂತ್ರೋಪಕರಣಗಳು ಮುಂತಾದ ಸಾಮರ್ಥ್ಯವನ್ನು ಪರೀಕ್ಷಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಏಕಗ್ರಾಮ ಹಾಗೂ ಬಹುಗ್ರಾಮ ನೀರು ಸರಬರಾಜು ಯೋಜನೆಗಳಿಗೆ ಮಂಜೂರಾತಿ ಪಡೆದು, ಕಾರ್ಯಗತವಾಗುವ ಸಮಯದಲ್ಲಿ ಎದುರಾಗುವ ಅರಣ್ಯಭೂಮಿ ಹಾಗೂ ಇನ್ನಿತರ ತಾಂತ್ರಿಕ ಸಮಸ್ಯೆಗಳ ಕಾರಣ ನೀಡಿ, ಯೋಜನೆಗಳನ್ನು ವೀಳಂಬ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ಯೋಜನಾವರದಿ ಸಿದ್ಧಪಡಿಸುವಾಗಲೇ ಎದುರಾಗುವ ಅಡ್ಡಿ ಆತಂಕಗಳನ್ನು ಗಮನಿಸಬೇಕೆಂದು ಸಲಹೆ ಮಾಡಿದರು. ಇದನ್ನೂ ಓದಿ: ಇದು ಸಿಎಂ ಅಳಿವು-ಉಳಿವಿನ ಸಮಾವೇಶ, ಜನರ ಸಾವಿನ ಮೇಲೆ ಮೈಸೂರು ಸಾಧನಾ ಸಮಾವೇಶ – ಆರ್.ಅಶೋಕ್ ಲೇವಡಿ
ಜಿಲ್ಲಾ ಪಂಚಾಯತಿ ಸಿಇಓಗಳು ತಿಂಗಳಲ್ಲಿ ಮೂರು ದಿನ ಪಂಚಾಯತ್ ರಾಜ್, ಗ್ರಾಮೀಣ ನೀರು ಸರಬರಾಜು ಹಾಗೂ ನರೇಗಾ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಬೇಕು, ಜಿಲ್ಲಾ ಮಟ್ಟದಲ್ಲೇ ಸಿಇಓಗಳು ಸಮಸ್ಯೆಗೆ ಪರಿಹಾರ ಹುಡಕಬೇಕು ಎಂದೂ ಸಚಿವರು ಈ ಸಂದರ್ಭದಲ್ಲಿ ಹೇಳಿದರು.
ಇಡೀ ದಿನ ನಡೆದ ಸಭೆಯಲ್ಲಿ ಸಚಿವರು ಜಿಲ್ಲಾವಾರು ಪ್ರಗತಿಯನ್ನು ಪರಿಶೀಲಿಸಿ, ಕಡಿಮೆ ಪ್ರಗತಿ ಸಾಧಿಸಿದ ಎಂಜನಿಯರುಗಳ ಚಳಿ ಬಿಡಿಸಿದರಲ್ಲದೆ, ಸಾಕಷ್ಟು ಪ್ರಮಾಣದಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸುವಲ್ಲಿ ಆಲಸ್ಯ ತೋರುವ ಎಂಜನಿಯರುಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ನೀರು ಕಲುಷಿತಗೊಂಡು ಗ್ರಾಮಗಳಲ್ಲಿ ಸಮಸ್ಯೆ ತಲೆದೋರಿದಲ್ಲಿ ಎಂಜನಿಯರುಗಳನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು. ಇದನ್ನೂ ಓದಿ: ಮಾಜಿ ಸಂಸದ ಅನಂತ ಕುಮಾರ್ ಹೆಗಡೆಗೆ ಜೀವ ಬೆದರಿಕೆ
ಸಾರ್ವಜನಿಕರಿಂದ ಬರುವ ದೂರುಗಳನ್ನು ತಮ್ಮ ಮೇಜಿನಿಂದ ಕಳುಹಿಸಿದಲ್ಲಿ ಮಾತ್ರ ಸಮಸ್ಯೆ ಬಗೆಹರಿಯುವದಲ್ಲ, ದೂರನ್ನು ಪೂರ್ಣವಾಗಿ ಪರಿಹರಿಸುವ ಮೂಲಕ ಜನರ ಸಮಸ್ಯೆಗಳನ್ನು ದೂರ ಮಾಡಬೇಕು, ಪತ್ರಿಕೆ ಹಾಗೂ ವಾಹಿನಿಗಳಲ್ಲಿ ಬರುವ ದೂರುಗಳನ್ನು ಅಂದೇ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಕ್ರಮ ಕೈಗೊಂಡು ಸೂಕ್ತ ಸ್ಪಷ್ಟನೆ ನೀಡಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಸಮೀರ್ ಶುಕ್ಲಾ, ಗ್ರಾಮೀಣ ನೀರು ಸರಬರಾಜು ಇಲಾಖೆಯ ನಿರ್ದೇಶಕ ಕೆ.ನಾಗೇಂದ್ರಪ್ರಸಾದ್ ಹಾಗೂ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಶಾಸಕರಿಗೂ ಅನುದಾನ ಸಿಗುತ್ತೆ, ತಾಳ್ಮೆಯಿಂದ ಇರಬೇಕು: ಡಿಕೆಶಿ