ಗದಗ: ಸಮರ್ಪಕ ಕುಡಿಯುವ ನೀರಿಗಾಗಿ ಆಗ್ರಹಿಸಿ ಸ್ಥಳೀಯರು ವಿನೂತನ ಪ್ರತಿಭಟನೆ ನಡೆಸಿದ್ದು, ಬಿಂದಿಗೆ, ಚೊಂಬು, ಪೊರಕೆ ಹಿಡಿದು ನಗರಸಭೆಗೆ ಮುತ್ತಿಗೆ ಹಾಕಿದ್ದಾರೆ.
ನಗರದ ಶಹಪೂರಪೇಟೆ ಬಡಾವಣೆಯಲ್ಲಿ ಕಳೆದ 6 ತಿಂಗಳಿಂದ ಸರಿಯಾಗಿ ನೀರು ಸರಬರಾಜು ಆಗಿಲ್ಲ. ಇದರಿಂದ ರೋಸಿಹೋದ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಮಟೆ ಬಾರಿಸುತ್ತ, ಖಾಲಿ ಬಿಂದಿಗೆ, ಚೊಂಬು, ಬಕೆಟ್, ಪೊರಕೆಯೊಂದಿಗೆ ಬಾಯಿ ಬಡೆದುಕೊಳ್ಳುತ್ತ ನಗರಸಭೆಗೆ ಮುತ್ತಿಗೆ ಹಾಕಿದರು.
Advertisement
Advertisement
ಈ ಹಿಂದೆ ಸಾಕಷ್ಟು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ರೋಸಿಹೋದ ಸ್ಥಳಿಯರು, ಶಹಪೂರಪೇಟೆಯಿಂದ ಮಹಾತ್ಮ ಗಾಂಧಿ ವೃತ್ತದ ಮಾರ್ಗವಾಗಿ ನಗರಸಭೆ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.
Advertisement
ಗದಗ-ಬೆಟಗೇರಿ ಅವಳಿ ನಗರದಲ್ಲಿ ದಿನದ 24 ಗಂಟೆಯೂ ಕುಡಿಯುವ ನೀರಿನ ಸಂಪರ್ಕ ಒದಗಿಸಲಾಗಿದೆ ಎಂದು ಜನಪ್ರತಿನಿಧಿಗಳು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ಅವಳಿ ನಗರದ ಅನೇಕ ಕಡೆಗಳಲ್ಲಿ ಸರಿಯಾಗಿ ಕುಡಿಯುವ ನೀರು ಬರುತ್ತಿಲ್ಲ. ಬೇಸಿಗೆಯಲ್ಲಿ ಪರಿಸ್ಥಿತಿ ಇನ್ನೂ ಗಂಭಿರವಾಗುತ್ತದೆ. ಹಬ್ಬದ ಸಂದರ್ಭದಲ್ಲೂ ನೀರಿಲ್ಲ ಎಂದರೆ ಹೇಗೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಹೋಳಿ ಹಬ್ಬಕ್ಕೆ ಬಾಯಿ ಬಡಿದುಕೊಳ್ಳುವ ಬದಲು, ನೀರಿಗಾಗಿ ಬಾಯಿ ಬಡಿದುಕೊಳ್ಳುವ ಪರಿಸ್ಥಿತಿ ಬಂದಿದೆ. ನೀರಿನ ಸಮಸ್ಯೆ ಬಗೆಹರಿಯುವರೆಗೂ ನಗರಸಭೆ ಬಿಟ್ಟು ಕದಲುವುದಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದರು. ಪ್ರತಿಭಟನೆಯಲ್ಲಿ ಮಹಿಳೆಯರು, ಮಕ್ಕಳು ಸೇರಿ ಅನೇಕರು ಪಾಲ್ಗೊಂಡಿದ್ದರು.